Bellary News:
ಇಂದು ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜ್ಯದ ಶಿವಮೊಗ್ಗ ಹಾಗೂ ಬಳ್ಳಾರಿಯ ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ನಗರದ ಕೋಟೆ ಪ್ರದೇಶ, ಕೌಲ್ಬಜಾರ್, ರೇಡಿಯೋ ಪಾರ್ಕ್, ಕಂಟೋನ್ಮಂಟ್, ತೇರುಬೀದಿ ಪ್ರದೇಶಗಳಲ್ಲಿರುವ ಮೇರಿ ಮಾತಾ ಚರ್ಚ್, ತೆಲುಗು, ತಮಿಳು, ಕನ್ನಡ ಚರ್ಚ್ಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ, ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಂತಾಗಲಿ, ಪ್ರತಿಯೊಬ್ಬರಲ್ಲೂ ಪರಸ್ಪರ, ಪ್ರೀತಿ, ವಿಶ್ವಾಸ ಸಹಬಾಳ್ವೆ ಕಂಡು ಬರಲಿ ಎಂದು ಶುಭ ಕೋರಲಾಯಿತು. ನಗರದ ವಿವಿಧ ಚರ್ಚ್ಗಳಲ್ಲಿ ಬುಧವಾರ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರಿಸ್ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಚರ್ಚ್ಗಳು ರಾತ್ರಿ ವೇಳೆ ಝಗಮಗಿಸುತ್ತಿದ್ದರೆ, ನಗರದ ಕಂಟೋನ್ಮೆಂಟ್, ತಿಲಕ್ನಗರ, ಇಂದಿರಾನಗರ, ಕೊಳಗಲ್ ರಸ್ತೆ, ಬೆಳಗಲ್ ರಸ್ತೆ ಮತ್ತು ಕೋಟೆ ಪ್ರದೇಶಗಳಲ್ಲಿನ ಕ್ರೈಸ್ತರ ನಿವಾಸಗೆಳೆದುರು ಅಲಂಕೃತ ‘ಕ್ರಿಸ್ಮಸ್ ಟ್ರಿ’ ಬಂಧು – ಬಾಂಧವರನ್ನು ಸ್ವಾಗತಿಸುತ್ತಿತ್ತು.
ಚರ್ಚ್ಗಳು ಆಗಮಿಸಿದ ಭಕ್ತರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ, ಬಂಧು – ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಮಂಗಳವಾರ ಮಧ್ಯರಾತ್ರಿ ನಗರದ ವಿವಿಧ ಚರ್ಚ್ಗಳಲ್ಲಿ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನ, ಉಪನ್ಯಾಸ ಕಾರ್ಯಕ್ರಮ- ಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಇತರ ಸಮುದಾಯಗಳ ಬಾಂಧವರಿಗೂ ಶುಭ ಹಾರೈಸಲಾಯಿತು.
Christmas celebrations in Shimoga:
ರಾತ್ರಿ 1.30ರ ತನಕ ಎಲ್ಲ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು . ಏಸು ಎಲ್ಲರನ್ನು ರಕ್ಷಿಸಲಿ, ಎಲ್ಲರಲ್ಲೂ ಶಾಂತಿ ನೆಲೆಸುವಂತೆ ಆಗಲಿ ಎಂದು ಪ್ರಾರ್ಥಿಸಲಾಯಿತು. ಏಸುಕ್ರಿಸ್ತ ಬೇತ್ಲಹೇಮ್ನ ಬಡ ಕುರುಬನ ಮನೆಯ ಕೊಟ್ಟಿಗೆಯಲ್ಲಿ ಹುಟ್ಟಿದ ಪ್ರತೀಕವಾಗಿ ಚರ್ಚ್ನ ಮುಂದೆ ಗೋದಲಿ ನಿರ್ಮಿಸಿ, ಅದರಲ್ಲಿ ಬಾಲ ಏಸುವಿಗೆ ಅಲಂಕಾರ ಮಾಡಿ ಸಂಭ್ರಮಿಸಿದರು. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನವನ್ನು ಶಿವಮೊಗ್ಗ ಜಿಲ್ಲೆಯ ಕ್ರೈಸ್ತ ಬಾಂಧವರು ಅತ್ಯಂತ ಸಂಭ್ರಮ – ಸಡಗರದಿಂದ ಆಚರಿಸಿದರು. ಎಲ್ಲ ತಾಲೂಕುಗಳಲ್ಲಿ ಕ್ರೈಸ್ತ ಭಾಂದವರು ರಾತ್ರಿ 11 ಗಂಟೆಯಿಂದಲೇ ಏಸುವಿನ ಪ್ರಾರ್ಥನೆ ಪ್ರಾರಂಭಿಸಿದರು. ನಗರದ ಸೇಕ್ರೆಡ್ ಹಾರ್ಟ್ ಚರ್ಚ್ನಲ್ಲಿ ಫಾದರ್ ಫ್ರಾನ್ಸಿಸ್ ಸೇರವೋ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು. ಬಿಶಪ್ ಫ್ರಾನ್ಸಿಸ್ ಸೇರವೋ ಮಾತನಾಡಿ, “ಕ್ರಿಸ್ಮಸ್ ಹಬ್ಬದ ಶುಭಾಶಯಗಳು, ಏಸುಕ್ರಿಸ್ತ ಮಾನವನಾಗಿ ಭೂಮಿಗೆ ಬಂದ ವಿಶೇಷ ಹಬ್ಬ ಇದು.
ಮಾನವನ ರೂಪದಲ್ಲಿ ಭೂಮಿಗೆ ಬಂದ ಭಗವಂತ, ನಾವು ಮನುಜರು ದೈವತ್ವದಲ್ಲಿ ಪಾಲುದಾರರಾಗಬೇಕು. ನಾವು ದೇವರಂತೆ ಆಗಬೇಕಾದರೆ, ಮನುಷ್ಯತ್ವದಲ್ಲಿ ಬದುಕುವುದು ಒಂದೇ ದಾರಿ ಎಂದು ಹೇಳಿದ್ದಾನೆ ಎಂದು ಅವರು ಡಿವಿಜಿ ಅವರ ಮೊದಲು ಮಾನವನಾಗು ಎಂಬ ಕಗ್ಗವನ್ನು ಪ್ರಸ್ತಾಪಿಸಿದರು. ಎಲ್ಲ ಚರ್ಚ್ಗಳ ಮುಂದೆ ಬಾಲ ಏಸುವನ್ನು ಪ್ರತಿಷ್ಠಾಪಿಸಿ, ವಿವಿಧ ಅಲಂಕಾರಗಳನ್ನು ಮಾಡಿ ಏಸು ಜನಿಸಿದ ದಿನವನ್ನೇ ನೆನಪು ಮಾಡುವಂತೆ ಮಾಡಲಾಗಿತ್ತು. ಇಂದು ಕ್ರೈಸ್ತ ಭಾಂದವರು ತಮ್ಮ ತಮ್ಮ ಮನೆಗಳಲ್ಲಿ ಏಸುವನ್ನು ಆರಾಧಿಸಿ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಹಬ್ಬವನ್ನು ಆಚರಿಸುತ್ತಿದ್ದಾರೆ.