Hubli News:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರಾಗಿರುವ ಡಾ.ಶ್ರೀಧರ್ ಹೊಸಮನಿ ಅವರು ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರ ಯೋಗ ಸಾಧನೆ ಕುರಿತ ವಿಶೇಷ ವರದಿಯನ್ನು ನಮ್ಮ ಪ್ರತಿನಿಧಿ ಹೆಚ್ ಬಿ ಗಡ್ಡದ್ ಮಾಡಿದ್ದಾರೆ.
ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಾಂಪಿಯನ್ಶಿಪ್ನಲ್ಲಿ ದ್ವೀತಿಯ ಸ್ಥಾನ ಪಡೆದು ದೇಶ ಹಾಗೂ ಹುಬ್ಬಳ್ಳಿ- ಧಾರವಾಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಅಂತಾರಾಷ್ಟ್ರೀಯ ಯೋಗಪಟು ಡಾ.ಶ್ರೀಧರ್ ಹೊಸಮನಿ ಮಹತ್ವದ ಸಾಧನೆ ಮಾಡಿದ್ದಾರೆ.
ಹೊಸಮನಿ ಅವರು ಹುಬ್ಬಳ್ಳಿ ಪಕ್ಕದ ಕುಸುಗಲ್ ಗ್ರಾಮದ ನಿವಾಸಿಯಾಗಿದ್ದು, ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ತಂದೆ ಯಂಕಪ್ಪ ಹೆಚ್. ನಿವೃತ್ತ ಉದ್ಯೋಗಿ ಮತ್ತು ತಾಯಿ ಶಕುಂತಲಾ ಹೆಚ್ ಅವರು ಗೃಹಿಣಿ. ಶ್ರೀಧರ್ ಅವರು 2009 ರಿಂದ ಯೋಗಾಭ್ಯಾಸ ಮಾಡುತ್ತಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರಾಗಿ ಮತ್ತು ಧಾರವಾಡದ ಆಯುಷ್ ಇಲಾಖೆಯಲ್ಲಿ ಅರೆಕಾಲಿಕ ಯೋಗ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ಥೈಲ್ಯಾಂಡ್ ಯೂಥ್ ಯೋಗ ಅಸೋಸಿಯೇಷನ್, ವರ್ಲ್ಡ್ ಯೂಥ್ ಯೋಗ ಫೆಡರೇಶನ್, ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ರಿಜಿಸ್ಟರ್ಡ್ ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಡಿಸೆಂಬರ್ 9 ರಂದು ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ನಡೆದ 6ನೇ ವರ್ಷದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 31-40 ವರ್ಷದ ವಯೋಮಿತಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗದಲ್ಲಿ ಡಿಪ್ಲೋಮಾದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಧಾರವಾಡದ ಆಯುಷ್ ಇಲಾಖೆಯಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಬೋಧಕರಾಗಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ಶುಲ್ಕವಿಲ್ಲದೆ ಹಲವು ಶಾಲಾ-ಕಾಲೇಜುಗಳಲ್ಲಿ ತರಬೇತಿ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಶ್ರೀಧರ್, ನಾನು ಚಿಕ್ಕ ವಯಸ್ಸಿನಿಂದಲೂ ಯೋಗದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಯೋಗ ಶಿಕ್ಷಕನಾಗಬೇಕು ಎಂದು ಯೋಗಾಭ್ಯಾಸ ಮಾಡಿದೆ. ನಂತರ ಡಿಪ್ಲೋಮಾ, ಸ್ನಾತಕೋತ್ತರ ಪದವಿ ಪಡೆದು ಹಲವು ಕಡೆ, ಯೋಗ ತರಬೇತಿ ನೀಡುವುದರ ಜೊತೆಗೆ ಬಿಡುವಿನ ಸಮಯದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಕಲಿಸಿಕೊಡುತ್ತೇನೆ.
ಈಗ ಥೈಲ್ಯಾಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು. ಯೋಗ ಗಂಗೋತ್ರಿ ಬೆಂಗಳೂರಿನಿಂದ ಯೋಗ ಪ್ರಶಸ್ತಿ, ಯೋಗ ನಿಧಿ ನೀಡುವ ಯೋಗೋತ್ಸವ-2020 ಪ್ರಶಸ್ತಿ, ವಿವೇಕಾನಂದ ಅಂತಾರಾಷ್ಟ್ರೀಯ ಪ್ರಕೃತಿ ಯೋಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. ಡಾ.ಹೊಸಮನಿ ಸಾಧನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಸಹೋದ್ಯೋಗಿಗಳಾದ ಮೋಹನ್ ವಜ್ಜನವರ್ ಹಾಗೂ ಉಮೇಶ ಮನಗೂಳಿ ಪ್ರತಿಕ್ರಿಯಿಸಿ, ಡಾ.ಶ್ರೀಧರ ಹೊಸಮನಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ತಾವಷ್ಟೇ ಅಲ್ಲದೆ ತಮ್ಮ ಜೊತೆಗಿರುವವರೆಗೂ ಯೋಗದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ನಮಗೆ ಹಾಗೂ ಸಿಬ್ಬಂದಿಗೆ ಬಿಡುವಿನ ಸಮಯದಲ್ಲಿ ಯೋಗಾಸನ ಕಲಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೂ ಯಾವುದೇ ಶುಲ್ಕ ಪಡೆಯದೆ ಯೋಗ ಕಲಿಸುವ ಮೂಲಕ ಮಾದರಿಯಾಗಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿರಿ : BUFFALO BREEDING CENTER : ಧಾರವಾಡದಲ್ಲಿದೆ ರಾಜ್ಯದ ಏಕೈಕ ಎಮ್ಮೆ ತಳಿ ಸಂವರ್ಧನಾ ಕೇಂದ್ರ