ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶನಿವಾರ ಬೆಳಿಗ್ಗೆ ಜನಜಂಗುಳಿಯಿಂದ ತುಂಬಿಕೊಂಡಿದ್ದ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಭಯೋತ್ಪಾದನಾ ಗುಂಪು ನಡೆಸಿದ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇನ್ನೂ 46 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಕನಿಷ್ಠ 14 ಮಂದಿ ಸೈನಿಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರು ರೈಲಿಗಾಗಿ ಪ್ಲಾಟ್‌ಪಾರ್ಮ್‌ನಲ್ಲಿ ಕಾಯುತ್ತಿದ್ದ ವೇಳೆ ಖ್ವೆಟ್ಟಾದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಭಾರಿ ಪ್ರಬಲ ಬಾಂಬ್ ಸ್ಫೋಟಿಸಿದೆ. ಇದರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತರ ಛಿದ್ರಗೊಂಡ ಶವಗಳು ಪ್ಲಾಟ್‌ಫಾರ್ಮ್‌ನ ಉದ್ದಗಲಕ್ಕೂ ಹರಡಿ ಬಿದ್ದಿದ್ದು, ಭಯಾನಕ ಸನ್ನಿವೇಶ ಸೃಷ್ಟಿಸಿದೆ. ನಿಲ್ದಾಣದ ಚಾವಣಿ ಹಾರಿ ಹೋಗಿದೆ. ಎಲ್ಲೆಡೆ ನೆತ್ತರು ಚೆಲ್ಲಾಡಿದೆ.
ಜನರ ಲಗೇಜುಗಳ ನಡುವೆ ಬದುಕುಳಿದವರಿಗಾಗಿ ಹುಡುಕಾಟ ನಡೆಸಲು ರಕ್ಷಣಾ ಕಾರ್ಯಕರ್ತರು ಪರದಾಡಿದರು.
ಜಾಫರ್ ಎಕ್ಸ್‌ಪ್ರೆಸ್ ರೈಲು ಪೇಶಾವರಕ್ಕೆ ಹೊರಡಲು ಅಣಿಯಾಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಇದು ಆತ್ಮಾಹುತಿ ದಾಳಿ ಇರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.
ಸ್ಥಳೀಯ ಉಗ್ರಗಾಮಿ ಗುಂಪು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಸ್ಫೋಟದ ಹೊಣೆ ಹೊತ್ತುಕೊಂಡಿದೆ.
ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಉಂಟಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕಾನೂನು ಜಾರಿ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದರು.
ಗಾಯಾಳುಗಳನ್ನು ಖ್ವೆಟ್ಟಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದರು.
ಕನಿಷ್ಠ 46 ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆ ಎಮರ್ಜೆನ್ಸಿ ಘೋಷಣೆ ಮಾಡಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಂಡಿದೆ.