ಬೆಳಗಾವಿ: ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ವಿಶೇಷಚೇತನ ಮಕ್ಕಳ ಪ್ರತ್ಯೇಕ ಉದ್ಯಾನವು ಹಲವರಿಗೆ ಹೊಸ ಚೈತನ್ಯ ಮೂಡಿಸಿದೆ ಎಂದು ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ ಅವರು ತಿಳಿಸಿದ್ದಾರೆ. ವಿಶೇಷಚೇತನ ಮಕ್ಕಳಿಗಾಗಿಯೇ ಬೆಳಗಾವಿಯಲ್ಲಿ ಸ್ಥಾಪನೆಯಾಗಿದೆ ವಿಶೇಷ ಉದ್ಯಾನ. ಒಂದೇ ಸೂರಿನಡಿ ಉಚಿತವಾಗಿ ಶಿಕ್ಷಣ, ಮನೋರಂಜನೆ ಜೊತೆಗೆ ಚಿಕಿತ್ಸೆ ಕೂಡ ಸಿಗುತ್ತಿದ್ದು, ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಹೊಸ ಚೈತನ್ಯ ಮೂಡಿಸುತ್ತಿದೆ. ಇದು ದೇಶದಲ್ಲೇ ಮೊದಲ ಮತ್ತು ವಿನೂತನ ಪ್ರಯತ್ನ ಎಂದು ತಿಳಿಸಿದ್ದಾರೆ.
ಬೆಳಗಾವಿ ಟಿಳಕವಾಡಿಯ ಮಹಾತ್ಮಾ ಫುಲೆ ಉದ್ಯಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 1 ಕೋಟಿ ರೂ. ಅನುದಾನದಲ್ಲಿ ಸಾವಿತ್ರಿಬಾಯಿ ಫುಲೆ ಚಿಕಿತ್ಸಾ ಕೇಂದ್ರದ ಹೆಸರಿನಲ್ಲಿ ವಿಶೇಷ ಚೇತನ ಮಕ್ಕಳಿಗೆ ಪ್ರತ್ಯೇಕ ಉದ್ಯಾನ ನಿರ್ಮಾಣವಾಗಿದೆ. ಅಂದಿನಿಂದ ನಿರಂತರವಾಗಿ ದಿವ್ಯಾಂಗ ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇದು ಸ್ಮಾರ್ಟ್ ಸಿಟಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ.
ಬೆಳಗಾವಿ ನಗರದಲ್ಲಿರುವ ಅಂಕುರ್ ವಿಶೇಷಚೇತನ ಮಕ್ಕಳ ಶಾಲೆ, ಸ್ಪರ್ಶ ಮತಿಬಂದ ಮಕ್ಕಳ ಶಾಲೆ, ಸಮರ್ಥನಂ ಅಂಗವಿಕಲರ ಸಂಸ್ಥೆ, ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆ. ಹೀಗೆ ಈ ನಾಲ್ಕೂ ಶಾಲೆಯ 200ಕ್ಕೂ ಅಧಿಕ ವಿಶೇಷಚೇತನ ಮಕ್ಕಳ ಬದುಕಿಗೆ ಇದು ಬೆಳಕಾಗಿದೆ. ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ ದಿವ್ಯಾಂಗ ಮಕ್ಕಳು ಇಲ್ಲಿ ಕಾಲ ಕಳೆಯಬಹುದಾಗಿದೆ. ಇನ್ನು ಏಕಕಾಲಕ್ಕೆ 90 ಮಕ್ಕಳಿಗೆ ಆಗುವಷ್ಟು ಪರಿಕರಗಳು ಇಲ್ಲಿರುವುದು ವಿಶೇಷ. ಪ್ರತಿನಿತ್ಯ ಆಯಾ ಶಾಲೆಗಳ 7 ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳಿಗೆ ಇಲ್ಲಿ ಆಟ, ಪಾಠವನ್ನು ಕಲಿಸುತ್ತಾರೆ. ಪಾಲಿಕೆಯ ಓರ್ವ ಸಿಬ್ಬಂದಿ ಉದ್ಯಾನ ನಿರ್ವಹಿಸುತ್ತಾರೆ.
ನಿತ್ಯ 50-60 ಮಕ್ಕಳು ಇಲ್ಲಿ ಹ್ಯಾಂಡ್ ಸ್ಕೇಟ್ ರೋಲರ್, ಲೆಗ್ ಸ್ಕೇಟ್ ರೋಲರ್, ವಾಕರ್ಸ್, ಫನ್ ಆಂಡ್ ಮಲ್ಟಿ ಜಿಮ್, ಜಿಮ್ ಸೈಕಲ್, ನಾಲ್ಕು ಬಗೆಯ ಸ್ವಿಂಗ್ಸ್, ಜಂಪಿಂಗ್ ಜಪಾಂಗ್, ಕಲರ್ ಟಬ್, ಪೆಗ್ ಬೋರ್ಡ್ಸ್, ವ್ಹೀಲ್ ಚೇರ್ ಸೇರಿ ಮತ್ತಿತರ ಆಟಿಕೆ ಸಾಮಾನು ಬಳಸಿ ಸಖತ್ ಎಂಜಾಯ್ ಮಾಡುತ್ತಾರೆ.
ಉದ್ಯಾನ ಯೋಜನೆ ಪರಿವೀಕ್ಷಣಾ ಅಧಿಕಾರಿ ನದೀಮ್ ಸನದಿ ಈಟಿವಿ ಭಾರತ ಜೊತೆಗೆ ಮಾತನಾಡಿ, ಫಿಜಿಯೋಥೆರಪಿ ತಜ್ಞರ ಸಲಹೆ ಪಡೆದುಕೊಂಡು ಕುಳಿತುಕೊಳ್ಳಲು ಬಾರದವರಿಗೆ ಕುಳಿತುಕೊಳ್ಳಲು, ನಡೆಯಲು ಆಗದವರಿಗೆ ನಡೆಯುವಂತೆ, ನಿಲ್ಲಲು ಆಗದವರು ನಿಲ್ಲುವಂತೆ, ನಡೆಯಲು ಆಗದವರು ನಡೆಯಲು ಅನುಕೂಲ ಆಗುವ ನಿಟ್ಟಿನಲ್ಲಿ ಅತ್ಯಾಧುನಿಕ ಪರಿಕರಗಳನ್ನು ತರಿಸಲಾಗಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆ ಶಾಲೆಯ ಬೀರಪ್ಪ ಮಾತನಾಡಿ, ಪ್ರತಿ ಬುಧವಾರ ಮತ್ತು ಶನಿವಾರ ನಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ನಮ್ಮಲ್ಲಿನ ಅದೇಷ್ಟೋ ಮಕ್ಕಳಿಗೆ ಕೈ ಮೇಲೆ ಎತ್ತಲು ಬರುತ್ತಿರಲಿಲ್ಲ. ವಾಕರ್ ಹಿಡಿದೂ ನಡೆಯಲು ಆಗುತ್ತಿರಲಿಲ್ಲ. ಇಲ್ಲಿ ಉಚಿತ ಚಿಕಿತ್ಸೆ ಸಿಕ್ಕ ಬಳಿಕ ಮಕ್ಕಳು ಬಹಳಷ್ಟು ಬದಲಾಗಿದ್ದಾರೆ. ಇದರ ಸದುಪಯೋಗ ಮತ್ತಷ್ಟು ವಿಶೇಷ ಚೇತನ ಮಕ್ಕಳಿಗೆ ಸಿಗಬೇಕಿದೆ ಎಂದರು.
2022ನೇ ಸಾಲಿನ ಐಸಾಕ್ ಜೋನಲ್ ಸ್ಮಾರ್ಟ್ ಸಿಟಿ ಅವಾರ್ಡ್(ಸೌತ್ ಜೋನ್) ಪ್ರಶಸ್ತಿ, 2022ರ ಯುನೈಟೆಡ್ ನೇಷನ್ಸ್ ಸ್ಮಾರ್ಟ್ ಸೊಲೂಶನ್ಸ್ ಆಂಡ್ ಇನ್ ಕ್ಲೂಸಿವ್ ಸಿಟೀಸ್ ಅವಾರ್ಡ್, ಸ್ಮಾರ್ಟ್ ಆಂಡ್ ಸಕ್ಸಸ್ ಫುಲ್ ಇನ್ ಕ್ಲೂಸಿವ್ ಸಿಟಿ ಅವಾರ್ಡ್, 2024ರ ಬೆಸ್ಟ್ ಇನ್ ಕ್ಲೂಸಿವ್ ಪ್ರೊಜೆಕ್ಟ್ ಆಟ್ ದಿ ಕನ್ವರ್ಜನ್ಸ್ ಇಂಡಿಯಾ ಎಕ್ಸಪೋ ಸೇರಿ 6ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಉದ್ಯಾನ ವಿಶೇಷತೆಗೆ ಅರಸಿ ಬಂದಿವೆ.
ಮಕ್ಕಳು ಆಟವಾಡುವಾಗ ಬಿದ್ದರೆ ಗಾಯವಾಗದಂತೆ ಇಡೀ ಹಾಲ್ ತುಂಬಾ ಮ್ಯಾಟ್ ಅಳವಡಿಸಲಾಗಿದೆ. ಮಕ್ಕಳ ಸ್ನೇಹಿ ಶೌಚಾಲಯ ವ್ಯವಸ್ಥೆಯಿದೆ. ಹಾಲ್ ಹೊರಗೂ ಕೂಡ ಮಕ್ಕಳು ವಾಕರ್ ಮೂಲಕ ತೆರಳಿ ಆಟ ಆಡಿ ಸಂಭ್ರಮಿಸುತ್ತಾರೆ ಎಂದರು.
ಬೆಳಗಾವಿ ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ ವಿಭಾಗದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 8 ಜನ ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳು ಪ್ರತಿನಿತ್ಯ ಕೇಂದ್ರಕ್ಕೆ ಆಗಮಿಸಿ ಮಕ್ಕಳಿಗೆ ಎರಡು ಗಂಟೆ ಉಚಿತವಾಗಿ ಫಿಜಿಯೋಥೆರಪಿ ಮಾಡುತ್ತಾರೆ. ವ್ಯಾಯಾಮ, ಆಕ್ಯುಪೇಷನಲ್ ಥೆರಪಿ, ಸ್ಪೀಚ್ ಥೆರಪಿ, ಹಿಯರಿಂಗ್ ಥೆರಪಿ, ಡ್ಯಾನ್ಸ್ ಥೆರಪಿ ಸೇರಿ ಮತ್ತಿತರ ಚಿಕಿತ್ಸೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇಲ್ಲಿನ ಉತ್ತಮ ಚಿಕಿತ್ಸೆಯ ಪರಿಣಾಮ ಮಕ್ಕಳು ಸದಾ ಚಟುವಟಿಕೆಯಿಂದ ಇರುವ ಜೊತೆಗೆ ದಿನದಿಂದ ದಿನಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುತ್ತಿದ್ದಾರೆ.
ವಿಶೇಷ ಚೇತನ ಮಕ್ಕಳಿಗಾಗಿಯೇ ಪ್ರತ್ಯೇಕ ಉದ್ಯಾನ ಇದೆ ಅಂತಾ ಅದೇಷ್ಟೋ ಜನರಿಗೆ ಗೊತ್ತೇ ಇಲ್ಲ. ಹಾಗಾಗಿ, ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳುವ ಮೂಲಕ ಮತ್ತಷ್ಟು ದಿವ್ಯಾಂಗ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಅಭಯ ಪಾಟೀಲ ಅವರ ಮುತುವರ್ಜಿಯಿಂದ 2021ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವಿಶೇಷ ಉದ್ಯಾನ ಉದ್ಘಾಟಿಸಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now