ನವದೆಹಲಿ: I.N.D.I.A ಬಣದ ಮಿತ್ರಪಕ್ಷಗಳ ನಡುವಿನ ಒಡಕಿನ ಹೇಳಿಕೆಯು ಬಿಜೆಪಿಗೆ ವರದಾನವಾಗಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ವಿಪಕ್ಷಗಳ I.N.D.I.A ಕೂಟದ ನಾಯಕತ್ವದ ಪ್ರಶ್ನೆಯು ಕಾಂಗ್ರೆಸ್ ಪಕ್ಷವನ್ನು ಕಸಿವಿಸಿಗೊಳಿಸಿದೆ. ಮೈತ್ರಿಯಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ, ಅದರ ನಾಯಕತ್ವವನ್ನು ಇತರ ಪಕ್ಷಗಳಿಗೆ ನೀಡಲು ಅದು ಸುತಾರಾಂ ಒಪ್ಪುತ್ತಿಲ್ಲ. ಹೀಗಾಗಿ, ಟಿಎಂಸಿ, ಆರ್‌ಜೆಡಿ, ಶಿವಸೇನೆ, ಎಸ್‌ಪಿ ನಾಯಕರ ಹೇಳಿಕೆಯನ್ನು ಅದು ತಿರಸ್ಕರಿಸಿದೆ.
ಇಂಡಿಯಾ ಕೂಟದಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿದೆ. ವಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗಲು ಸಮರ್ಥವಾಗಿದೆ. ಮೈತ್ರಿಕೂಟವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಪ್ರತಿಪಾದಿಸಿದೆ.
ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟವು ಸೋತು ಸುಣ್ಣವಾದ ನಂತರ ಅದರ ನಾಯಕತ್ವದ ಪ್ರಶ್ನೆ ಎದ್ದಿದೆ. ಬಿಜೆಪಿ ವಿರುದ್ಧ ಸಮರ್ಥವಾಗಿ ಹೋರಾಡಲು ಕಾಂಗ್ರೆಸ್ ಸಶಕ್ತವಾಗಿಲ್ಲ ಎಂಬುದು ಕೆಲ ವಿಪಕ್ಷಗಳ ಅಪಸ್ವರವಾಗಿದೆ. ಜಾರ್ಖಂಡ್, ಜಮ್ಮು- ಕಾಶ್ಮೀರ ಬಿಟ್ಟು ಉಳಿದೆಲ್ಲೆಡೆ ಕೂಟ ಹೀನಾಯ ಸೋಲು ಕಂಡಿದ್ದು, ಅಸ್ತಿತ್ವಕ್ಕೆ ಧಕ್ಕೆ ತಂದಿದೆ.
ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರದ ವಿವಿಧ ವೈಫಲ್ಯವನ್ನು ರಾಹುಲ್ ಗಾಂಧಿ ಅವರು ನಿರಂತರವಾಗಿ ಎದುರಿಸುತ್ತಿದ್ದಾರೆ. ಆದರೆ, ಅವರ ವಿರುದ್ಧವೇ ಹೇಳಿಕೆ ನೀಡುವುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಸೋಲುಗಳು ಕಾಂಗ್ರೆಸ್ ಪಕ್ಷದ ಜಂಘಾಬಲವನ್ನೇ ಅಲುಗಾಡಿಸಿದೆ. ಇದು ಬಿಜೆಪಿ ಮಾತ್ರವಲ್ಲ, ಮಿತ್ರಪಕ್ಷಗಳಿಂದಲೂ ಅದು ಟೀಕೆಗೆ ಗುರಿಯಾಗಿದೆ. ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಟಿಎಂಸಿ ನಾಯಕರು ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೂ ಮೊದಲು ಟಿಎಂಸಿ ಇಂಡಿಯಾ ಕೂಟದ ಭಾಗವಾಗಿರಲು ಒಪ್ಪಿರಲಿಲ್ಲ. ಇದೀಗ ಕೂಟದ ನಾಯಕತ್ವವನ್ನು ವಹಿಸಿಕೊಳ್ಳುವ ಆಸಕ್ತಿ ವಹಿಸಿದೆ. ಕೂಟವನ್ನು ಬಲಪಡಿಸಲು ಟಿಎಂಸಿ ಏನೂ ಮಾಡಿಲ್ಲ. ರಾಹುಲ್ ಗಾಂಧಿ ಅವರು, ವಿಪಕ್ಷಗಳನ್ನು ಒಗ್ಗೂಡಿಸಲು ಪ್ರಮುಖ ಪಾತ್ರ ವಹಿಸಿದರು. ಈಗ ಸಂಸತ್ತಿನ ಒಳಗೂ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯ ಅಧೀರ್ ರಂಜನ್ ಚೌಧರಿ ಅವರು ತಿಳಿಸಿದರು.
ಲೋಕಸಭೆ ಚುನಾವಣೆ ಬಳಿಕ ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರು ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಿದ್ದಾರೆ. ಇಂಡಿಯಾ ಕೂಟವನ್ನು ತಾನು ಮುನ್ನಡೆಸುವುದಾಗಿ ಹೇಳಿಕೆ ನೀಡಿದ ಟಿಎಂಸಿ ಮುಖ್ಯಸ್ಥೆ, ಬಂಗಾಳ ಸಿಎಂ ಮಮತಾ ಅವರ ಹೇಳಿಕೆಗೆ ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಅವರು ಬೆಂಬಲ ನೀಡಿದ್ದಾರೆ.
ಕಾಂಗ್ರೆಸ್ ಲೋಕಸಭೆಯಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಇಂಡಿಯಾ ಬಣದಲ್ಲಿ ರಾಷ್ಟ್ರ ಹಿತಾಸಕ್ತಿ ಹೊಂದಿರುವ ಏಕೈಕ ಪಕ್ಷವಾಗಿದೆ. ವಿಪಕ್ಷಗಳೇ ರಾಹುಲ್ ಗಾಂಧಿ ಅವರ ಬಗ್ಗೆ ಟೀಕೆ ಮಾಡುವುದರಿಂದ ಅದು ಬಿಜೆಪಿಗೆ ಲಾಭ ತರಲಿದೆ ಎಂದು ಎಚ್ಚರಿಕೆ ನೀಡಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now