ತುರುವೇಕೆರೆ (ತುಮಕೂರು): ಇದು ಒಂದೆಡೆ ಖುಷಿ ನೀಡಿದರೂ, ವಾಡಿಕೆಗಿಂತ ಅಧಿಕ ಹಾಗೂ ಅಕಾಲಿಕ ಮಳೆ ರೈತರಿಗೆ ಸಂಕಷ್ಟ ಉಂಟುಮಾಡಿದೆ. ಈ ಬಾರಿ ಉತ್ತಮ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಅಡಕೆ ಬೆಳೆಗೆ ಒಂದಿಲ್ಲೊಂದು ರೋಗ ಬಾಧೆ ಕಾಡುತ್ತಿದ್ದರೆ, ರಾಗಿಗೂ ಮಳೆಯಿಂದ ತೊಂದರೆ ಎದುರಾಗಿದೆ.
ಸ್ವಲ್ಪ ಬಿಡುವಿನ ತುದಿಯಲ್ಲೇ ಹವಾಮಾನ ಇಲಾಖೆ, ಮುಂದಿನ 5 ದಿನಗಳ ಕಾಲ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಜಿಲ್ಲೆಗೆ ಯೆಲ್ಲೊಅಲರ್ಟ್’ ಘೋಷಣೆಯಾದ ಬೆನ್ನಲ್ಲೇ ರೈತರು ನಿರೀಕ್ಷಿತ ಬೆಳೆ ಪಡೆಯಲು ಆತಂಕ ಎದುರಿಸುತ್ತಿದ್ದಾರೆ.ಜಿಲ್ಲೆಯ 1,67,510 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತಲಾಗಿದೆ.
ಜಿಲ್ಲಾದ್ಯಂತ ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹೊಲ ಗದ್ದೆಗಳು ನೀರಿನಿಂದ ತುಂಬಿವೆ.
ತುಮಕೂರು ಜಿಲ್ಲೆಯ ಪ್ರಮುಖ ಬೆಳೆ ರಾಗಿ ನಿಯಂತ್ರಿಸಿ ಹೆಚ್ಚಿನ ಆದಾಯ ಪಡೆಯುವ ಸಲುವಾಗಿ ಇತ್ತೀಚಿನ ವರ್ಷಗಳಲ್ಲಿ ರೈತರು ಅಡಕೆ ಬೆಳೆಗೆ ಅವಲಂಬಿತರಾಗಿ ಹೆಚ್ಚು ಬಿತ್ತನೆ ಮಾಡುತ್ತಾ ಜಿಲ್ಲೆಯ ಪ್ರಮುಖ ಬೆಳೆ ಉತ್ಪಾದನಾ ಮಟ್ಟ ಹಂತ ಹಂತವಾಗಿ ಕ್ಷೀಣಿಸುತ್ತಲೇ ಬರುತ್ತಿದೆ.
ಒಂದೆಡೆ ಬೆಳೆಗಳಿಗೆ ಹೆಚ್ಚಿನ ನೀರಾವರಿ ಅತಿವೃಷ್ಟಿಗೆ ಕಾರಣವಾಗಿದೆ. ಈಗ ಕೃಷಿಕರು ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಪೋಷಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಜಿಲ್ಲೆಯಾದ್ಯಂತ 985 ಮಿಮೀ(51%) ಮಳೆಯಾಗಿದ್ದು, ಬಹುಪಾಲು ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು, ಬಾವಿ, ಡ್ಯಾಂ, ಚಾನಲ್‌ಗಳು ಸೇರಿದಂತೆ ನೀರಾವರಿ ಪ್ರದೇಶಗಳು ಸಮೃದ್ಧವಾಗಿವೆ.
ಅಡಕೆಗೆ ಕೂಳೆ ಮತ್ತು ಚುಕ್ಕೆ ಸುಳಿರೋಗ ಬಿಳಿ ಹೇನು ರೋಗದ ಜತೆಗೆ ಹೊಸದಾಗಿ ರಿಂಗ್ ಸ್ಪಾಟ್ ವೈರಸ್ ಕೆಲವೆಡೆ ಹರಡುತ್ತಿದೆ. ಜತೆಗೆ, ರೋಗ ಭೀತಿಯಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ.
ಅಡಕೆ ಮರಗಳಲ್ಲಿ ಹರಳು ಉದುರುತ್ತಿರುವ ಪರಿಸ್ಥಿತಿ ಬೆಳೆಗಾರರಿಗೆ ಕಂಗಾಲಾಗುವಂತೆ ಮಾಡಿದ್ದು, ಇನ್ನು ಅಡಕೆ ಚೇಣಿದಾರರು ನಷ್ಟದ ಭೀತಿಯಲ್ಲಿ ನಲುಗುತ್ತಿದ್ದಾರೆ.
ನಿರಂತರ ಮಳೆಯಿಂದಾಗಿ ತೆಂಗಿನಂತಹ ಬೆಳೆಗಳಿಗೆ ಅನುಕೂಲವಾದರೂ ಅಡಕೆ, ರಾಗಿ ಬೆಳೆಗಳಿಗೆ ನಿಗದಿತ ಪ್ರಮಾಣವಷ್ಟೇ ನೀರು ಬೇಕಾಗುತ್ತದೆ.
ಕಟಾವು ಯಂತ್ರಗಳಿಗೆ ನಿಗದಿತ ಮೊತ್ತವನ್ನು ಜಿಲ್ಲಾಧಿಕಾರಿ ನಿಗದಿಪಡಿಸಿದ್ದರೂ, ಯಂತ್ರ ಮಾಲೀಕರು ನಿರ್ಲಕ್ಷಿಸುತ್ತಿರುವುದು ಒಂದೆಡೆಯಾದರೆ, ಯಂತ್ರಗಳ ಕಟಾವಿನಲ್ಲಿ ಇಳುವರಿ ಸೀಮಿತಗೊಂಡು ಲಾಭಾಂಶವಿಲ್ಲದೆ ಸಾಲದ ಜತೆಗೆ ರೈತರು, ನಷ್ಟದ ಮೂಟೆ ಹೊರಬೇಕಾಗಿದೆ.
ನಿರಂತರ ಮಳೆಯಿಂದಾಗಿ ನೆಲ ಕಚ್ಚಿರುವ ರಾಗಿ ಬೆಳೆ ಕಟಾವಿನ ಹಂತದಲ್ಲಿದ್ದು, ಕೊಯ್ಲುಗಾರರ ಕೊರತೆಯಿಂದಾಗಿ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.
“ಹಲವು ಜಿಲ್ಲೆಗಳಲ್ಲಿ ಈ ಬಾರಿ ಅಡಕೆಗೆ ಸುಳಿರೋಗ, ಎಲೆಚುಕ್ಕೆ ರೋಗ ಉಲ್ಬಣಿಸುತ್ತಿವೆ. ಇದು ಹಲವೆಡೆ ತೀವ್ರಗೊಳ್ಳುತ್ತಿದೆ.ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಗಂಭೀರವಾಗಿ ಪರಿಗಣಿಸಿ, ಅಗತ್ಯ ಸಂಶೋಧನೆ ಜತೆಗೆ ಬೆಳೆಗಾರರಿಗೆ ನೆರವು ನೀಡಲು ಹೆಚ್ಚಿನ ಕ್ರಮ ಕೈಗೊಳ್ಳಬೇಕಾಗಿದೆ” ಎಂದು ತುರುವೇಕೆರೆ ತಾಲೂಕು ತೆಂಗು ಮತ್ತು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್. ಜಯರಾಮ್ ಒತ್ತಾಯಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಮಳೆಯಾಗುತ್ತಿದ್ದು, ವಾಡಿಕೆಗಿಂತ ಇದುವರೆಗೆ 930 ಮಿಮೀ ಮಳೆ ದಾಖಲಾಗಿದೆ. ಕೃಷಿಕರು ಭಯಭೀತರಾಗದೆ ಹವಾಮಾನ ಮುನ್ಸೂಚನೆ ಮಾಹಿತಿ ಪಡೆದು ಬೆಳೆ ಕಟಾವು ಮಾಡುವುದು ಸೂಕ್ತ.
ಜಿಲ್ಲೆಯ ಕೃಷಿಕರು ಈ ಬಾರಿ ಹೆಚ್ಚಾಗಿ ರಾಗಿ ಬೆಳೆ ಬಿತ್ತನೆ ಮಾಡಿದ್ದು, ತಾಲೂಕಿನಲ್ಲಿ 19,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತುರ್ತು ಸಂಧರ್ಭಗಳಲ್ಲಿ ಬೆಳೆ ನಷ್ಟವಾದಲ್ಲಿ ಜಿಲ್ಲಾ ಮತ್ತು ತಾಲೂಕು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದು” ಎಂದು ತುರುವೇಕೆರೆ ಸಹಾಯಕ ಕೃಷಿ ನಿರ್ದೇಶಕಿ ಬಿ. ಪೂಜಾ ತಿಳಿಸಿದ್ದಾರೆ.