ಬೆಂಗಳೂರು, (ಅ.18): ರಾಜ್ಯಾದ್ಯಂತ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಸಮರ್ಪಕ ಸಿದ್ಧತೆಯಿಲ್ಲದೆ ಇ-ಖಾತಾ ಕಡ್ಡಾಯಗೊಳಿಸಿರುವುದು ಆಸ್ತಿ ಮಾಲೀಕರನ್ನು ಸಮಸ್ಯೆಗೆ ಗುರಿಯಾಗಿಸಿದೆ.
ಸರ್ವರ್ ಸಮಸ್ಯೆ, ಕರಡು ಖಾತಾಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ ಮತ್ತಿತರ ಕಾರಣದಿಂದ ಇ-ಖಾತಾ ದೊರೆಯದೆ ಆಸ್ತಿ ಮಾಲೀಕರು ಪಾಡು ಪರದಾಡುವಂತಾಗಿದೆ.
ಸಾರ್ವಜನಿಕರು ಆಸ್ತಿ ನೋಂದಣಿ, ಪಡೆಯುವುದು ಇ-ಖಾತಾ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದಿರುವುದು ಸೇರಿ ವಹಿವಾಟು ಮಾಡಲಾಗದೆ ಅತಂತ್ರಗೊಂಡಿದ್ದಾರೆ.
ರಾಜ್ಯಾದ್ಯಂತ ಬಿಬಿಎಂಪಿ, ಬಿಡಿಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ.
ಇ-ಖಾತಾ ಪಡೆಯಲು ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಇ-ಖಾತಾವು ಕಂದಾಯ ನಿವೇಶನ ಸೇರಿ ಬಹುತೇಕ ಆಸ್ತಿಗಳಿಗೆ ಇಲ್ಲ. ಇ – ಖಾತಾವು ಆಸ್ತಿ ನೋಂದಣಿಗೆ ಕಡ್ಡಾಯ ಎಂದು ತಿಳಿಸಲಾಗಿದೆ. ಇ ಖಾತಾ ಹೊಂದಿಲ್ಲದ ಆಸ್ತಿಗಳಿಗೆ ಹಲವು ಸಹಕಾರ ಬ್ಯಾಂಕ್ ಹಾಗೂ ಸೊಸೈಟಿಗಳು ಸಾಲ ಮಂಜೂರು ಮಾಡಿದ್ದು, ಅಡಮಾನ ನೋಂದಣಿ (ಡಿಟಿಡಿ-ಡಿಪಾಸಿಟ್ ಆಫ್ ಟೈಟಲ್ಸ್) ಗೆ ಇ-ಖಾತಾ ಕಡ್ಡಾಯದಿಂದ ಅವಕಾಶ ದೊರೆಯುತ್ತಿಲ್ಲ. ಇದರಿಂದಾಗಿ ಮಂಜೂರಾದ ಸಾಲ ಬಿಡುಗಡೆ ಮಾಡಿಸಿಕೊಳ್ಳಲೂ ಗ್ರಾಹಕರು ಪರದಾಟ ನಡೆಸುತ್ತಿದ್ದಾರೆ.
ಬ್ಯಾಂಕ್ ವ್ಯವಹಾರಗಳಿಗೆ ತೀವ್ರ ಅಡಚಣೆಗೆ ಪರಿಹರಿಸಬೇಕು ಎಂದು ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ಆಗ್ರಹಿಸಿದ್ದಾರೆ.
ದಾವಣಗೆರೆ, ಧಾರವಾಡ, ಯಾದಗಿರಿ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತಿತರ ಕಡೆ ನಿಧಾನವಾಗಿಯಾದರೂ ಇ-ಖಾತಾ ನೋಂದಣಿ ಸಾಂಗವಾಗಿ ನೆರವೇರುತ್ತಿದ್ದು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕಮಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸಮಸ್ಯೆ ಆಗುತ್ತಿದೆ ಎಂದು ನಿರ್ದೇಶಕ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು (ಐರ್ಜಿ) ಶುಕ್ರವಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಹಮ್ಮಿಕೊಂಡಿದ್ದಾರೆ.