Haveri News:
ಜಿಲ್ಲಾ ಪಂಚಾಯತ್ ಆವರಣ ಶನಿವಾರ ಸರ್ಕಾರದ AKKA CAFE ಗೆ ಹೊಸ ಭಾಷ್ಯ ಬರೆಯಿತು. ರಾಜ್ಯದಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡುವ AKKA CAFE ಉದ್ಘಾಟನೆಯಾಯಿತು. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಈ ವಿಶೇಷ ಅಕ್ಕ ಕೆಫೆ ಉದ್ಘಾಟಿಸಿದರು.
12 ಲಿಂಗತ್ವ ಅಲ್ಪಸಂಖ್ಯಾತರು ಇಲ್ಲಿ ಅಡುಗೆ ಮಾಡುವುದು, ತರಕಾರಿ ಹೆಚ್ಚುವುದು, ಅನ್ನ, ಸಾಂಬಾರ್, ಮಿರ್ಚಿ ಮಂಡಕ್ಕಿ ಸೇರಿದಂತೆ ವಿವಿಧ ಪದಾರ್ಥಗಳನ್ನ ಪೂರೈಸಲಿದ್ದಾರೆ. ಕೆಫೆಯ ಶುಚಿತ್ವ ಮತ್ತು ಹಣದ ಕೌಂಟರ್ ಸಹ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಿಸಲಿದ್ದಾರೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಅಕ್ಕ ಕೆಫೆ ಉದ್ಘಾಟಿಸಿದರು. ರಾಜ್ಯದಲ್ಲಿ ಸರ್ಕಾರ ಮಹಿಳೆಯರಿಗಾಗಿ 50 ಅಕ್ಕ ಕೆಫೆ ತೆರೆದಿದೆ.
ಬೆಂಗಳೂರು ಸೇರಿದಂತೆ ವಿವಿಧೆಡೆ AKKA CAFE ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಹಾವೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಾವೇ ಕೆಫೆ ನಿರ್ವಹಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಿಸುವ ರಾಜ್ಯದ ಪ್ರಥಮ ಅಕ್ಕ ಕೆಫೆ ನಿರ್ಮಾಣವಾಗಿದೆ. ಜಿಲ್ಲಾ ಪಂಚಾಯತ್ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇಂತಹ ಕಾರ್ಯಕ್ಕೆ ಮುಂದಾಗಿರುವ ಸಿಇಒ ಅಕ್ಷಯಶ್ರೀಧರ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
AKKA CAFE ಯಿಂದಲೇ ಶನಿವಾರ ಸುಮಾರು 700 ಜನರಿಗೆ ಊಟ ಬಡಿಸಲಾಯಿತು. ಹಾವೇರಿ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅಕ್ಕ ಕೆಫೆಯಿಂದಲೇ ಉಪಹಾರ ಪೂರೈಸಲಾಯಿತು. ಅಲ್ಲದೇ ಮಧ್ಯಾಹ್ನದ ಭೋಜನವನ್ನು ಸಹ ಅಕ್ಕಕೆಫೆಯಿಂದ ಪೂರೈಸಲಾಯಿತು. ಬಿಸಿ ಬಿಸಿ ರೊಟ್ಟಿ, ಚಪಾತಿ, ಹೋಳಿಗೆ, ಪಚಡಿ, ಹೆಸರುಕಾಳು ಪಲ್ಯೆ, ಬದನೆಕಾಯಿ ಎಣಗಾಯಿ ಮಿರ್ಚಿಯನ್ನ ಅತಿಥಿಗಳು ಸವಿದು ಸಂತಸ ವ್ಯಕ್ತಪಡಿಸಿದರು.
ಲಿಂಗತ್ವ ಅಲ್ಪಸಂಖ್ಯಾತರು ಸಹ ಆಹಾರ ಪೂರೈಸಲು ತುದಿಗಾಲ ಮೇಲೆ ನಿಂತಿದ್ದರು. ತಾವು ಮಾಡಿದ ಆಹಾರವನ್ನು ಸಾರ್ವಜನಿಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವಿತ್ತು. ಆದರೆ, ಮೊದಲ ದಿನವೇ 700ಕ್ಕೂ ಅಧಿಕ ಊಟಗಳು ಪೂರೈಕೆಯಾಗಿದ್ದು, ತಮ್ಮ ಕೆಲಸ ಸಾರ್ಥಕವಾಗಿದೆ. ನಾವು ಸಹ ಎಲ್ಲರಂತೆ ಸ್ವಾಭಿಮಾನದಿಂದ ಬದುಕಲು ಕೆಫೆ ಅವಕಾಶ ಕಲ್ಪಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಲಿಂಗತ್ವ ಅಲ್ಪಸಂಖ್ಯಾತರಾದ ಪೂರ್ಣಿಮಾ ಮಾತನಾಡಿ, ಹಾವೇರಿಯಲ್ಲಿ ನಮ್ಮದೇ ನಿರ್ವಹಣೆಯಲ್ಲಿ AKKA CAFE ನಡೆಯುತ್ತಿರುವುದು ಹೆಮ್ಮೆಯ ವಿಚಾರ. ನಾವು ಮಾಡಿರುವ ಅಡುಗೆ ಊಟ ಮಾಡುತ್ತಿರುವುದು ಖುಷಿ ಆಗುತ್ತಿದೆ ಎಂದರು.
ಸ್ವತಃ ನಾವೇ ಕೈಯಾರೆ ನಮ್ಮ ಪ್ರೀತಿಪಾತ್ರರಿಗೆ ಊಟಬಡಿಸುತ್ತಿರುವ ಅನುಭವ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೊಸ ಹೊಸ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸುವುದಾಗಿ ಲಿಂಗತ್ವ ಅಲ್ಪಸಂಖ್ಯಾತರು ತಿಳಿಸಿದರು. ಸಚಿವ ಶಿವಾನಂದ ಪಾಟೀಲ್ ಮತ್ತು ಹಾವೇರಿ ಜಿಲ್ಲೆಯ ಆರು ಶಾಸಕರು, ಗಣ್ಯರು ಅಕ್ಕ ಕೆಫೆಯಲ್ಲಿ ಮಾಡಿರುವ ಭೋಜನವನ್ನ ಸವಿದರು.
ಹೋಳಿಗೆ, ರೊಟ್ಟಿ, ಚಪಾತಿ, ಅಕ್ಕಿಪಾಯಸ, ಮೊಸರನ್ನ, ಪಚಡಿ ಮತ್ತು ಅನ್ನ ಸಾಂಬಾರ್ ಸಿದ್ದಪಡಿಸಲಾಗಿತ್ತು. ಹೆಸರು ಕಾಳು ಪಲ್ಯೆ, ಮುಳುಗಾಯಿ ಎಣಗಾಯಿ ಸವಿದರು. ಇನ್ನೊಬ್ಬರು ಲಿಂಗತ್ವ ಅಲ್ಪಸಂಖ್ಯಾತರಾದ ಲಕ್ಷ್ಮಿ ಎಂಬುವವರು ಮಾತನಾಡಿ, ನಮಗೆ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ಮೊದಲ ಮೆಟ್ಟಿಲು, ನಮಗೆ ಹೀಗೆ ಸಪೋರ್ಟ್ ಮಾಡಿ. ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತೇವೆ ಎಂದು ಹೇಳಿದರು.
ಇದನ್ನು ಓದಿರಿ : HINDU TEMPLES KHATA CHANGE : 15,413.17 ಎಕರೆ ಜಮೀನು ಖಾತೆ ಇಂಡೀಕರಣ