ಆಲಮಟ್ಟಿ (ವಿಜಯಪುರ): ಆಲಮಟ್ಟಿ ಜಲವಿದ್ಯುದಾಗಾರಕ್ಕೆ ನೀಡಿದ ಗುರಿಯಲ್ಲಿ ಈಗಾಗಲೇ ಶೇ. 84.40ರಷ್ಟು ವಿದ್ಯುತ್ ಉತ್ಪಾದಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗುರಿ ಮೀರಿ ವಿದ್ಯುತ್ ಉತ್ಪಾದನೆಯಾಗುವ ಸಾಧ್ಯತೆ ದಟ್ಟವಾಗಿದೆ.ಕೇಂದ್ರ ಸರಕಾರ ಆಲಮಟ್ಟಿ ಜಲವಿದ್ಯುದಾಗಾರಕ್ಕೆ ಪ್ರಸಕ್ತ ಸಾಲಿನಲ್ಲಿ 483 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯ ಗುರಿ ನೀಡಿದೆ. ಈಗಾಗಲೇ 398 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಸೋಮವಾರ 4 ಯುನಿಟ್‌ಗಳಿಂದ 75 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ 20 ನಾನಾ ಜಲಾಶಯಗಳಲ್ಲಿ ಜಲ ವಿದ್ಯುದಾಗಾರಗಳಿವೆ. ಅದರಲ್ಲಿ ಕೃಷಿ, ಕುಡಿವ ನೀರು ಪೂರೈಕೆ, ವಿದ್ಯುತ್ ಉತ್ಪಾದನೆ ಹೀಗೆ ನಾನಾ ಉದ್ದೇಶಗಳನ್ನು ಹೊಂದಿದ 5 ಜಲಾಶಯಗಳಿವೆ. ಈ ಜಲಾಶಯಗಳ ಜಲ ವಿದ್ಯುದಾಗಾರಗಳಲ್ಲಿ ಆಲಮಟ್ಟಿಯೂ ಒಂದು.
2023-24ನೇ ಸಾಲಿನಲ್ಲಿ 510 ಮಿಲಿಯನ್ ಯುನಿಟ್ ಗುರಿ ನೀಡಲಾಗಿತ್ತು. ಆದರೆ, ಭೀಕರ ಬರದಿಂದ ಆಲಮಟ್ಟಿ ವಿದ್ಯುದಾಗಾರದಿಂದ ಕೇವಲ ಶೇ. 46ರಷ್ಟು (235 ಮಿಲಿಯನ್ ಯುನಿಟ್) ಮಾತ್ರ ವಿದ್ಯುತ್ ಉತ್ಪಾದನೆಯಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಜೂ. 7ರಿಂದ ಒಳಹರಿವು ಆರಂಭವಾಗಿದೆ. ಜೂ. 15ರಿಂದ ಜಲಾಶಯದ ನೀರನ್ನು ವಿದ್ಯುದಾಗಾರದ ಮೂಲಕ ನದಿ ಪಾತ್ರಕ್ಕೆ ನೀರು ಹರಿಸಲು ಆರಂಭಿಸಲಾಗಿದೆ. ಅಂದಿನಿಂದ ಇಂದಿನವರೆಗೆ ಸತತವಾಗಿ ವಿದ್ಯುತ್ ಉತ್ಪಾದಿಸುತ್ತಾ ಬರಲಾಗಿದೆ. ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹಾಗೂ ಜಲಾಶಯದ ನೀರನ್ನು ನದಿ ಪಾತ್ರಕ್ಕೆ ಹರಿ ಬಿಡುವ ಪ್ರಮಾಣದ ಮೇಲೆ ಇಲ್ಲಿವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ವಿದ್ಯುತ್ ಉತ್ಪಾದನೆ ಸಾಮರ್ಥ್ಯ: ಆಲಮಟ್ಟಿ ಜಲ ವಿದ್ಯುದಾಗಾರದಲ್ಲಿ 2004-05ರಿಂದ ವಿದ್ಯುತ್ ಉತ್ಪಾದನೆ ಪ್ರಾರಂಭಗೊಂಡಿದೆ. ವಿದ್ಯುದಾಗಾರದಲ್ಲಿ 55 ಮೆಗಾವ್ಯಾಟ್ ಸಾಮರ್ಥ್ಯದ 5 ಘಟಕ, 15 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೇರಿ ಒಟ್ಟು 6 ಘಟಕಗಳಿವೆ. 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ವಿದ್ಯುತ್ ಘಟಕದ ಎಲ್ಲ 6 ಘಟಕಗಳು ಕಾರ್ಯಾರಂಭ ಮಾಡಲು ಜಲಾಶಯದಿಂದ 45 ಸಾವಿರ ಕ್ಯುಸೆಕ್ ನೀರು ಹರಿಸಬೇಕಾಗುತ್ತದೆ. ನಿತ್ಯ ಎಲ್ಲ ಘಟಕಗಳು ಕಾರ್ಯಾರಂಭ ಮಾಡಿದರೆ 6 ದಶಲಕ್ಷ ಯುನಿಟ್‌ವರೆಗೆ ವಿದ್ಯುತ್ ಉತ್ಪಾದನೆ ನಿತ್ಯ ಆಗುತ್ತದೆ.
ಆಲಮಟ್ಟಿ ಜಲಾಶಯದ ಮಟ್ಟ 511.16 ಮೀಟರ್‌ವರೆಗೆ ಇದ್ದಾಗ 55 ಮೆಗಾವ್ಯಾಟ್‌ನ ಘಟಕಗಳು ಕಾರ್ಯಾರಂಭ ಮಾಡಬಹುದು. ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಇದ್ದಾಗ ಐದು ಘಟಕಗಳು ವಿದ್ಯುತ್ ಉತ್ಪಾದಿಸುವುದಿಲ್ಲ. ಆದರೆ ಜಲಾಶಯದ ಮಟ್ಟ 505.97 ಮೀಟರ್‌ಗೆ ಕುಸಿದರೂ 15 ಮೆಗಾವ್ಯಾಟ್‌ನ ಒಂದು ಘಟಕ ಕಾರ್ಯಾಚರಣೆ ನಡೆಸಬಹುದು.
ಆಲಮಟ್ಟಿ ಜಲಾಶಯ ಮಟ್ಟ: ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯ ಸೋಮವಾರ ಗರಿಷ್ಠ ಮಟ್ಟದವರೆಗೆ ನೀರು ಸಂಗ್ರಹವಿತ್ತು. 20,010 ಕ್ಯುಸೆಕ್ ಒಳಹರಿವು ಇತ್ತು. ಜಲವಿದ್ಯುದಾಗಾರ ಮೂಲಕ 18,500 ಕ್ಯುಸೆಕ್ ಸೇರಿ 20,010 ಕ್ಯುಸೆಕ್ ನೀರು ಹೊರ ಹರಿವು ಇರುತ್ತದೆ.