ಬೆಂಗಳೂರು: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಲಕ್ಕಿ ಅಲಿ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಬಾಲಿವುಡ್ ಗಾಯಕ ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ಬೆಂಗಳೂರಿನ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಗಿಡಗಳನ್ನು ನಾಶಪಡಿಸುವ ಮೂಲಕ ಸುಮಾರು 75 ಲಕ್ಷ ರೂ. ನಷ್ಟ ಉಂಟು ಮಾಡಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ವಿಧಿಸಿದೆ.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ”ದೂರುದಾರೆಯಾದ ಬುಜ್ಜಮ್ಮ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ. ಹೀಗಾಗಿ, ಪೊಲೀಸರು ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್ ಹೆಸರಿನಲ್ಲಿ 87 ಎಕರೆ ಆಸ್ತಿ ಇದೆ.
ಇದರ ಸಮೀಪದಲ್ಲೇ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಅವರು ಲಕ್ಕಿ ಅಲಿ ಸಹೋದರನಿಂದ ಆಸ್ತಿ ಖರೀದಿಸಲಾಗಿದೆ ಎಂದು ಹೇಳುತ್ತಿದಾರೆ.
ಈ ಸಂಬಂಧ 2016ರಿಂದ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಮತ್ತು ಲಕ್ಕಿ ಅಲಿ ಅವರ ನಡುವೆ ಸಿವಿಲ್ ದಾವೆ ನಡೆಯುತ್ತಿದೆ” ಎಂದು ತಿಳಿಸಿದರು.
ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್ ಎಂಬವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
”ಬುಜ್ಜಮ್ಮ ಅವರ ಸೊಸೆಯಾಗಿರುವ ರೋಹಿಣಿ ಸಿಂಧೂರಿ ಅವರು ಅಧಿಕಾರ ಬಳಸಿ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗೇಟ್ ಬೀಗ ತೆಗೆಯಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ.
ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಸಿಟಿವಿ ವಿಡಿಯೋ ಸಹ ನಮ್ಮ ಬಳಿ ಇದೆ” ಎಂದು ಪೀಠಕ್ಕೆ ವಿವರಿಸಿದರು.
2012ರ ಏಪ್ರಿಲ್ 30ರಂದು ಪುತ್ರ ಜಿ.ಸುಧೀರ್ ರೆಡ್ಡಿ ಅವರು ಯಲಹಂಕ ತಾಲ್ಲೂಕಿನ ವಾಸುದೇವಪುರ (ಕೆಂಚೇನಹಳ್ಳಿ) ಗ್ರಾಮದ ಸರ್ವೇ ನಂ.25, 26, 27, 28 ಮತ್ತು 30ರಲ್ಲಿ 3 ಎಕರೆ ಜಮೀನನ್ನು ಮನ್ಸೂರ್ ಎಂಬವರಿಂದ ಖರೀದಿಸಿದ್ದು, ಅದನ್ನು ಈಚೆಗೆ ತಮಗೆ ದಾನ ಮಾಡಿಕೊಟ್ಟಿದ್ದಾರೆ.
ಹೀಗಾಗಿ, ಕಾಂಪೌಂಡ್ ಕಟ್ಟಿ ಅಭಿವೃದ್ಧಿಪಡಿಸಿದ್ದು, ಅದನ್ನು ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಎಂಬವರು ಬಲವಂತವಾಗಿ ಸ್ವಾಧೀನಪಡಿಸಲು ಯತ್ನಿಸುತ್ತಿದ್ದಾರೆ ಎಂದು ಬುಜ್ಜಮ್ಮ ದೂರಿದ್ದರು.
ವಾದ ಆಲಿಸಿದ ಪೀಠ, ”ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಮಾಹಿತಿ ಪಡೆದು ವಾದ ಮಾಡುವವರೆಗೆ ಲಕ್ಕಿ ಅಲಿ ಮತ್ತು ಇತರರ ವಿರುದ್ಧದ ಎಫ್‌ಐಆರ್ ಮತ್ತು ಆ ಸಂಬಂಧ ಬೆಂಗಳೂರಿನ 7ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
2024ರ ನವೆಂಬರ್ 17 ಮತ್ತು 18ರಂದು ಕುಟುಂಬಸಮೇತ ಹೊರಗಡೆ ಹೋಗಿದ್ದಾಗ ಲಕ್ಕಿ ಅಲಿ ಮತ್ತು ಅವರ ಕಡೆಯವರು ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಬೆಳೆಸಿದ್ದ ಗಿಡಗಳನ್ನು ಕಿತ್ತು ಹಾಕಿ ಸುಮಾರು 75 ಲಕ್ಷ ರೂ.
ನಷ್ಟ ಉಂಟು ಮಾಡಿದ್ದಾರೆ. ಅಲ್ಲದೇ, ತಮ್ಮ ಜಮೀನಿಗೆ ಹೋಗಲು ಇರುವ ಸಾರ್ವಜನಿಕ ರಸ್ತೆಗೆ ಭದ್ರತೆ ಒದಗಿಸಿ ಓಡಾಟವನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿ ಬುಜ್ಜಮ್ಮ ನವೆಂಬರ್ 19ರಂದು ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.