ಕರ್ನೂಲ್: ಕರ್ನೂಲ್ ಜಿಲ್ಲೆಯ ಕಪ್ಪಟ್ರಲ್ಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಪರಿಶೋಧನೆ ನಡೆಸುವ ಪ್ರಸ್ತಾವಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬ್ರೇಕ್ ಹಾಕಿದ್ದಾರೆ.
ಜಿಲ್ಲೆಯಲ್ಲಿ ಯುರೇನಿಯಂ ಲಭ್ಯತೆಯ ಪರಿಶೀಲನೆಗಾಗಿ ಕೊಳವೆ ಬಾವಿಗಳನ್ನು ಕೊರೆಯುವ ಪ್ರಸ್ತಾಪವನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ ಎಂದು ಕರ್ನೂಲ್ ಜಿಲ್ಲಾಧಿಕಾರಿ ಪಿ. ರಂಜಿತ್ ಬಾಷಾ ಮಂಗಳವಾರ ರಾತ್ರಿ ಹೇಳಿಕೆಯ ಮೂಲಕ ಪ್ರಕಟಿಸಿದ್ದಾರೆ.
“ಮುಖ್ಯಮಂತ್ರಿಗಳ ಸೂಚನೆಯಂತೆ, ಮೀಸಲು ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಲಭ್ಯತೆ ಪರಿಶೀಲಿಸಲು ಯಾವುದೇ ಕೊಳವೆಬಾವಿಗಳನ್ನು ಕೊರೆಯಲಾಗುವುದಿಲ್ಲ” ಎಂದು ಜಿಲ್ಲಾಧಿಕಾರಿ ಬಾಷಾ ಹೇಳಿದರು.
ಕಪ್ಪಟ್ರಲ್ಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಕೊಳವೆ ಬಾವಿಗಳನ್ನು ಕೊರೆಯುವ ಪ್ರಸ್ತಾಪದ ವಿರುದ್ಧ ದೇವನಕೊಂಡ ಮಂಡಲದ ಸುಮಾರು 12 ಗ್ರಾಮಗಳ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ವಾರವೂ ಈ ಹಳ್ಳಿಗಳ ನೂರಾರು ಜನರು ಕರ್ನೂಲ್ ಕಲೆಕ್ಟರೇಟ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಯುರೇನಿಯಂ ಗಣಿಗಾರಿಕೆಯು ತಮ್ಮ ಜೀವನೋಪಾಯವನ್ನು ಕಸಿಯಲಿದೆ ಎಂದು ಈ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಯಾವುದೇ ಅಗೆತದ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿಂದು ಮಾಧವ್ ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದ್ದರು. ವದಂತಿಗಳನ್ನು ನಂಬದಂತೆ ಎಸ್ ಪಿ ಗ್ರಾಮಸ್ಥರಿಗೆ ಮನವಿ ಮಾಡಿದ್ದರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು
ಮಾಹಿತಿಯನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತವು ಎರಡು ದಿನಗಳ ಹಿಂದೆ ಸಭೆ ಕರೆದಿತ್ತು. ಆದರೆ ಪ್ರತಿಭಟನಾಕಾರರು ಸಭೆಯನ್ನು ಬಹಿಷ್ಕರಿಸಿ ತಮ್ಮ ಆಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಿದ್ದರು.
ಪರಮಾಣು ಶಕ್ತಿ ಇಲಾಖೆಯ (ಡಿಎಇ) ಅಡಿಯಲ್ಲಿನ ಪರಮಾಣು ಖನಿಜಗಳ ಪರಿಶೋಧನೆ ಮತ್ತು ಸಂಶೋಧನಾ ನಿರ್ದೇಶನಾಲಯ (ಎಎಂಡಿ) ಯುರೇನಿಯಂ ನಿಕ್ಷೇಪಗಳ ಉಪಸ್ಥಿತಿಯನ್ನು ಅನ್ವೇಷಿಸಲು ಅಡೋನಿ ಶ್ರೇಣಿಯ ಕಪ್ಪಟ್ರಲ್ಲಾದ 468.25 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದಲ್ಲಿ 68 ಕೊಳವೆಬಾವಿಗಳನ್ನು ಕೊರೆಯಲು ಪ್ರಸ್ತಾಪಿಸಿತ್ತು.
ಈ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪಗಳ ಸಮೀಕ್ಷೆ ನಡೆಸಲು ಅನುಮೋದನೆ ನೀಡಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜೂನ್ 26, 2023 ರಂದು ಅಧಿಸೂಚನೆ ಹೊರಡಿಸಿದೆ. ಎಎಮ್ಡಿ ಅಧಿಕಾರಿಗಳು, ಸ್ಥಳೀಯ ಕಂದಾಯ ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಕಳೆದ ತಿಂಗಳು ಕೊಳವೆಬಾವಿ ಕೊರೆಯಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದರು.
ಯುರೇನಿಯಂ ಪರಿಶೋಧನೆಯ ಸಂಭಾವ್ಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಯುವಕರ ಗುಂಪೊಂದು ಅಭಿಯಾನವನ್ನು ಪ್ರಾರಂಭಿಸಿದ ನಂತರ ಸುತ್ತಮುತ್ತಲಿನ ಹಳ್ಳಿಗಳ ಜನರಿಂದಲೂ ಯುರೇನಿಯಂ ಗಣಿಗಾರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಲಾರಂಭಿಸಿತು. ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಎಡ ಪಕ್ಷಗಳ ನಾಯಕರು ಸಹ ಜನರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.