ಬೆಂಗಳೂರು: ತನ್ನ ವಿರುದ್ಧ ಸಾಕ್ಷಿ ನುಡಿಯಲು ಬರುವವರ ಟಿಎ,ಡಿಎ ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಶಂಕಿತ ಲಷ್ಕರ್ ಇ ತೋಯ್ಬಾ ಸಂಘಟನೆ ಸದಸ್ಯನಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಈ ಆದೇಶ ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ನ್ಯಾಯಪೀಠ 10 ಸಾವಿರ ರೂ ದಂಡ ವಿಧಿಸಿದೆ.
ತಾನು ನೀಡಿದ ಭರವಸೆಯಂತೆ ಸಾಕ್ಷಿಗೆ ಟಿಎ, ಡಿಎ ಮೊತ್ತ 20,650 ರೂಗಳನ್ನು ಅರ್ಜಿದಾರ ಮುಂದಿನ ಹತ್ತು ದಿನದಲ್ಲಿ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಅರ್ಜಿದಾರರ ಪಾಟಿ – ಸವಾಲು ಹಕ್ಕನ್ನು ಮೊಟಕುಗೊಳಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಜತೆಗೆ, 10 ಸಾವಿರ ದಂಡವನ್ನು ಆದೇಶದ ಪ್ರತಿ ಲಭ್ಯವಾದ 10 ದಿನದಲ್ಲಿ ಪಾವತಿ ಮಾಡದಿದ್ದಲ್ಲಿ ಅವರ ಆಸ್ತಿಯಿಂದ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.
ಹಿಂದೂ ಮುಖಂಡರನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಂಧನಕ್ಕೊಳಗಾಗಿರುವ ಆರೋಪಿ ಡಾ.ಸಬೀಲ್ ಅಹ್ಮದ್ ಅಲಿಯಾಸ್ ಮೋಟು ಡಾಕ್ಟರ್ ಎಂಬುವರು ಸಾಕ್ಷಿಗೆ ತಾನು ಭರಿಸಬೇಕಾದ ಟಿಎ,ಡಿಎ ಮೊತ್ತವನ್ನು ಕಡಿಮೆ ಮಾಡುವಂತೆ ಕೋರಿ ಸಲ್ಲಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು.
ವೈಜ್ಞಾನಿಕ ಸಾಕ್ಷ್ಯ ವಿಚಾರಣೆ 2024ರ ಜನವರಿ 8ರಿಂದ ಪ್ರಾರಂಭವಾಗಿತ್ತು. ಪಾಟಿ ಸವಾಲು ನಡೆಸುವ ಸಂಬಂಧ ಅರ್ಜಿದಾರ(ಆರೋಪಿ) ಮನವಿಯ ಮೇರೆಗೆ 2024ರ ಫೆಬ್ರವರಿ 15ರಂದು ವಿಚಾರಣೆ ಮುಂದೂಡಲಾಗಿತ್ತು. 2024ರ ಮಾರ್ಚ್ 19ರಂದು ಸಾಕ್ಷಿಯ ಟಿಎ,ಡಿಎಯನ್ನು ತಾನೇ ಭರಿಸುತ್ತೇನೆ ಎಂದು ಅರ್ಜಿದಾರ ಭರವಸೆ ನೀಡಿದ ಹಿನ್ನೆಲೆ ಎರಡನೇ ಬಾರಿಗೆ ವಿಚಾರಣೆ ಮುಂದೂಡಲಾಗಿದೆ.
ಸಾಕ್ಷಿಯ ಟಿಎ,ಡಿಎ ವೆಚ್ಚವನ್ನು ಕಡಿಮೆ ಮಾಡುವಂತೆ ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಅರ್ಜಿ ವಜಾ ಆಗಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಅರ್ಜಿದಾರರಿಗೆ ಪ್ರಶ್ನೆ ಮಾಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರಿಗೆ ಅನಾರೋಗ್ಯದ ಕಾರಣದಿಂದ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯು ವಿಚಾರಣೆಯನ್ನು ಮುಂದೂಡಲು ಮನವಿ ಮಾಡಲಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ವಿವರಿಸಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಒದಗಿಸಿರಲಿಲ್ಲ ಎಂದು ಪೀಠ ಹೇಳಿದೆ.
ಸೌದಿ ಅರೇಬಿಯಾ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ)ಯಲ್ಲಿ ಅಪರಾಧಿಯಾಗಿರುವ ಅರ್ಜಿದಾರರ ನಡವಳಿಕೆಯಿಂದ ವಿಚಾರಣೆಯನ್ನು ವಿನಾಕಾರಣ ಒಂದು ವರ್ಷಗಳ ಕಾಲ ಎಳೆಯಲಾಗಿದೆ.
ಈ ರೀತಿಯ ಅರ್ಜಿಗಳನ್ನು ಸಲ್ಲಿಸುವ ಮೂಲಕ ಪ್ರಕರಣವನ್ನು ಮತ್ತಷ್ಟು ಕಾಲ ಎಳೆಯುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ, ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗ ಪಡೆಸಿಕೊಳ್ಳಲಾಗುತ್ತದೆ.
ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರ ಇತರೆ ಆರೋಪಿಗಳೊಂದಿಗೆ ಸೇರಿ ನಿಷೇಧಿತ ಭಯೋತ್ಪಾದನೆ ಸಂಘಟನೆಯಾದ ಲಷ್ಕರ್ ಇ ತೋಯ್ಬಾ ಜೊತೆ ಕೈ ಜೋಡಿಸಿ ಹಿಂದೂ ಧರ್ಮದ ಮತ್ತು ಪೊಲೀಸ್ ಇಲಾಖೆಯ ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಪಿತೂರಿ ನಡೆಸಿದ್ದರು.
ಅಲ್ಲದೆ, ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಬಂದೂಕುಗಳು ಮತ್ತು ಮದ್ದುಗುಂಡುಗಳ್ನು ಬಳಸಿಕೊಂಡು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಭಂಗಗೊಳಿಸುವುದು ಮತ್ತು ಭಯೋತ್ಪಾದಕ ಚುಟವಟಿಕೆಗಳಿಗೆ ಹಣವನ್ನು ಸಂಗ್ರಹಿಸಲು ದರೋಡೆ ಮತ್ತು ಡಕಾಯಿತಿ ನಡೆಸಿದ ಆರೋಪದಲ್ಲಿ ಎನ್‌ಐಎಯಿಂದ ಬಂಧನಕ್ಕೊಳಗಾಗಿದ್ದರು.
ಕ್ರಿಮಿನಲ್ ಪಿತೂರಿ ನಡೆಸುವುದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಹಲವರನ್ನು ನೇಮಕ ಮಾಡಿಕೊಂಡು ಧಾರ್ಮಿಕ ನಾಯಕರನ್ನು ಹತ್ಯೆಗೆ ಗುರಿಯಾಗಿಸಿಕೊಂಡಿದ್ದರು.
ಅಲ್ಲದೆ, ನಕಲಿ ಗುರುತಿನ ಚೀಟಿಗಳನ್ನು ನೀಡಿ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡಿದ್ದರು. ಜತೆಗೆ, ಅವರ ಸಂದೇಶಗಳನ್ನು ಇ-ಮೇಲ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದರು.
ಈ ಕೃತ್ಯಗಳಿಗಾಗಿ ಅರ್ಜಿದಾರರು ಪಾಕಿಸ್ತಾನದ ರಿಯಾದ್‌ನಲ್ಲಿ ಹಣ ಸಂಗ್ರಹಿಸಿ ಆರ್ಥಿಕವಾಗಿ ನೆರವಾಗುತ್ತಿದ್ದರು. ಆ ಮೂಲಕ ಸೌದಿ ಅರೇಬಿಯಾ, ಪಾಕಿಸ್ತಾನದ ಹಲವು ವ್ಯಕ್ತಿಗಳನ್ನು ಗುರುತಿಸಿ ಎಲ್‌ಇಟಿ ಸಂಘಟನೆಗೆ ಸೇರಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದು, ಭಾರತದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುವ ಉದ್ದೇಶ ಹೊಂದಿದ್ದರು.
ಜತೆಗೆ, ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೊಲೆ ಮಾಡುವುದಕ್ಕಾಗಿ ಪ್ರಕರಣದ ಮೊದಲನೇ ಮತ್ತು ಎರಡನೇ ಆರೋಪಿ 2012ರ ಆಗಸ್ಟ್ 29ರಂದು ಶೇಷಾಚಲ ಎಂಬುವರ ಮನೆಯ ಬಳಿ ಬಂದಿದ್ದರು.
ಈ ವೇಳೆ ಅವರನ್ನು ಬಂಧಿಸಿದ್ದ ಪೊಲೀಸರು ದ್ವಿಚಕ್ರವಾಹನ, ಪಿಸ್ತೂಲ್ ಮತ್ತು ಗುಂಡುಗಳ್ನು ವಶಡಿಸಿಕೊಂಡಿದ್ದರು.
ಆರೋಪಿಗಳ ವಿರುದ್ಧ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸುವ ಸಲುವಾಗಿ ವಿಚಾರಣೆ ಪ್ರಾರಂಭಿಸಿತ್ತು.
ಸಾಕ್ಷಿ ನುಡಿಯುವ ಸಲುವಾಗಿ ವಿಜ್ಞಾನಿಯೊಬ್ಬರು ಕೇರಳದ ತಿರುವನಂತಪುರದಿಂದ ಮೂರು ಬಾರಿ ಆಗಮಿಸಿದ್ದರೂ, ಆದರೆ ಅರ್ಜಿದಾರರು ಕಲಾವಕಾಶ ಕೋರಿದ್ದರು. ಜತೆಗೆ, ಮುಂದಿನ ವಿಚಾರಣೆಗೆ ಸಾಕ್ಷಿ ಆಗಮಿಸಿದಾಗ ಅವರ ಟಿಎ,ಡಿಎ ಭರಿಸುವುದಾಗಿ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಾಕ್ಷಿಯ ಟಿಎ,ಡಿಎಗೆ 20,650 ರೂಗಳನ್ನು ನಿಗದಿ ಪಡಿಸಿ ಸರ್ಕಾರಿ ವಕೀಲರು, ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಮೊತ್ತ ಅತ್ಯಂತ ಹೆಚ್ಚಾಗಿದೆ, ಕಡಿಮೆ ಮಾಡಬೇಕು ಎಂದು ಅರ್ಜಿದಾರರು ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಎನ್‌ಐಎ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.