ಶಿವಮೊಗ್ಗ, ನವೆಂಬರ್ 28: ಅಡಿಕೆ ನಿಷೇಧದ ಭೀತಿ, ಬೆಲೆ ಏರಿಳಿತ, ಕಾರ್ಮಿಕರ ಕೊರತೆ ಮುಂತಾದ ಸಮಸ್ಯೆಗಳಿಗೆ ಸಿಲುಕಿ ಮಲೆನಾಡಿನ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶವನ್ನು ಡಿಸೆಂಬರ್ 6ರಂದು ಆಯೋಜಿಸಲಾಗಿದೆ. ಕೇಂದ್ರ ಕೃಷಿ ಸಚಿವರನ್ನು ಸಹ ಸಮಾವೇಶಕ್ಕೆ ಆಹ್ವಾನಿಸಲಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ನೇತೃತ್ವದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಂತಾದವರ ನಿಯೋಗ ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಭೇಟಿಯಾಗಿ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿತು.
ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತು. ಸಚಿವರು ಕೇಂದ್ರ ಸರ್ಕಾರವು ಅಡಿಕೆ ಬೆಳೆಗಾರರ ಪರವಾಗಿ ಇರುತ್ತದೆ ಎಂದು ಭರವಸೆ ಕೊಟ್ಟರು. ಸಚಿವರನ್ನು ಡಿಸೆಂಬರ್ 6ರಂದು ನಡೆಯುವ ಅಡಿಕೆ ಬೆಳೆಗಾರರ ಸಮಾವೇಶಕ್ಕೂ ಆಹ್ವಾನಿಸಲಾಯಿತು.
ಸಂಸದ ಬಿ. ವೈ. ರಾಘವೇಂದ್ರ ನೇತೃತ್ವದ ನಿಯೋಗ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಸಚಿವರಿಗೆ ವಿವರಣೆ ನೀಡಿತು. ಅಲ್ಲದೇ ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪಿಸಲು ಮನವಿ ಸಲ್ಲಿಕೆ ಮಾಡಿತು. ಅಡಿಕೆ ಬೆಳೆಗಾರರ ಸಮಾವೇಶ ಬೆಳೆಗಾರರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬೇಕು ಎಂದು ಎಚ್. ಎಸ್. ಮಂಜಪ್ಪ ಹೊಸಬಾಳೆ ಹೇಳಿದ್ದಾರೆ.
ಹಲವು ವರ್ಷಗಳ ಬಳಿಕ ಬೆಳೆಗಾರರ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗುತ್ತಿದೆ.ಡಿಸೆಂಬರ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದ ಆಹ್ವಾನವನ್ನು ಒಪ್ಪಿರುವ ಸಚಿವರು ಅಡಿಕೆ ಬೆಳೆಗಾರರ ನೆರವಿಗೆ ಸರ್ಕಾರ ಬದ್ಧವಾಗಿದೆ, ಸಮವೇಶಕ್ಕೆ ಆಗಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಡಿಕೆ ಬೆಳೆಗಾರರ ಕುರಿತು ಒಂದು ವಿಚಾರಗೋಷ್ಠಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸನ್ಮಾನ, ಅಡಿಕೆ ಬೆಳೆಗಾರರ ಸಂಘದ ಹಿಂದಿನ ಐವರು ಅಧ್ಯಕ್ಷರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ಮುಂತಾದ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಕೆಲವು ವರ್ಷಗಳಿಂದ ಎಲೆಚುಕ್ಕೆ ರೋಗದಿಂದ ಮಲೆನಾಡಿನ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ವರ್ಷ ಮಳೆ ಕೊರತೆಯ ಕಾರಣ ತೋಟ ಒಣಗಿ ಹೋಗಿತ್ತು. ಈ ವರ್ಷ ಸುರಿದ ಅಧಿಕ ಮಳೆಯ ಕಾರಣ ಕೊಳೆ ರೋಗ ಬಂದು ಅಡಿಕೆ ಫಲಸು ಕಡಿಮೆಯಾಗಿದೆ. ಇದರ ಜೊತೆ ಕಾರ್ಮಿಕರ ಕೊರತೆ, ಅಡಿಕೆ ನಿಷೇಧ ಭೀತಿ, ಬಗರ್ ಹುಕ್ಕುಂ ಸಮಸ್ಯೆ ರೈತರನ್ನು ಕಾಡುತ್ತಿದೆ.
ಅಡಿಕೆಯಲ್ಲಿ ಔಷಧೀಯ ಗುಣವಿದೆ, ಅದು ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವರಿಕೆ ಮಾಡಿಕೊಡಲಾಗುತ್ತಿದೆ. ಆದರೂ ಸಹ ಅಡಿಕೆ ನಿಷೇಧದ ಬಗ್ಗೆ ಆಗಾಗ ಚರ್ಚೆಗಳು ಉಂಟಾಗಿ ಬೆಳೆಗಾರರು ಆತಂಕಗೊಳ್ಳುತ್ತಾರೆ. ಅಡಿಕೆ ಬೆಳೆ ಕುರಿತು ಸಂಶೋಧನೆ ನಡೆಸಲು ಕೇಂದ್ರ ಕೃಷಿ ಸಚಿವಾಲಯದಿಂದಲೇ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಈಗ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಕೃಷಿ ಸಚಿವರು ಆಗಮಿಸುವ ಕಾರಣ ಮತ್ತೊಮ್ಮೆ ಅವರ ಮೇಲೆ ಒತ್ತಡವನ್ನು ಹಾಕಲಾಗುತ್ತದೆ. ಈ ಸಮಾವೇಶಕ್ಕೆ ಸುಮಾರು 50 ಸಾವಿರ ರೈತರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ. ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಸಚಿವರಿಗೆ ವಿವರಣೆ ನೀಡಿ, ಬೆಳೆಗಾರರ ಹಿತ ಕಾಪಾಡಬೇಕು ಎಂದು ಸಮಾವೇಶದ ಮೂಲಕ ಸಚಿವರನ್ನು ಆಗ್ರಹಿಸಲಾಗುತ್ತದೆ.