ಬೆಂಗಳೂರು: ತೆರಿಗೆ ಬಾಕಿ ಪಾವತಿಸದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಈ ಮೂಲಕ ತೆರಿಗೆ ಕಟ್ಟದೇ ನಿರ್ಲಕ್ಷ್ಯ ವಹಿಸುತ್ತಿದ್ದವರಿಗೆ ಬಿಸಿ ತಾಗಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟಲ್‌ಮೆಂಟ್ (ಓಟಿಎಸ್) ಗಡುವು ಮುಗಿದಿದೆ. ಈ ಬೆನ್ನಲ್ಲೇ ತೆರಿಗೆ ಪಾವತಿಸದವರ ಆಸ್ತಿಗಳನ್ನು ಹರಾಜು ಹಾಕಿ, ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ.
ಮೂರು ಹಂತದ ನೋಟಿಸ್ ನೀಡಿದರೂ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರೆ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಮೂಲಕ ಬಾಕಿ ತೆರಿಗೆ ವಸೂಲಿಗೆ ಪಾಲಿಕೆಯು ತೀವ್ರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟರೂ ಬಾಕಿ ತೆರಿಗೆ ಕಟ್ಟಿಲ್ಲ. ಜೊತೆಗೆ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯ ಗಡುವು ಸಹ ಮುಕ್ತಾಯಗೊಂಡಿದೆ. ಆದರೂ ತೆರಿಗೆ ಕಟ್ಟದವರಿಗೆ ಡಿಸೆಂಬರ್ 1ರಿಂದ ಬಡ್ಡಿ ಮತ್ತು ಆಸ್ತಿ ಹರಾಜು ಅಸ್ತ್ರ ಪ್ರಯೋಗಿಸಲು ಪಾಲಿಕೆ ಸಜ್ಜಾಗಿದೆ.
ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ ಶೇ.60 ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಅವಕಾಶ ನೀಡಿದರೂ ಕೂಡಾ ಶೇ.40 ರಷ್ಟು ಜನರು ತೆರಿಗೆ ಪಾವತಿಸಿಲ್ಲ. ಅಂತಹವರಿಗೆ ಇಂದಿನಿಂದ ದುಪ್ಪಟ್ಟು ದಂಡದ ಜತೆಗೆ ತೆರಿಗೆ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಬಾಕಿ ತೆರಿಗೆಗೆ ಬಾಕಿ ಉಳಿಸಿಕೊಂಡಷ್ಟೇ ದಂಡವನ್ನು ಪಾಲಿಕೆ ವಿಧಿಸಲಿದೆ.
ಈವರೆಗೆ 3,751ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲಾಗಿದ್ದು, 4 ಸಾವಿರ ಕೋಟಿ ರೂಪಾಯಿ ಗುರಿ ಮುಟ್ಟಲು ಇಲ್ಲಿಯವರೆಗೂ ಪಾಲಿಕೆಗೆ ಸಾಧ್ಯವಾಗಿಲ್ಲ. ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6,381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಲಾಗಿದೆ.
ತೆರಿಗೆ ಪಾವತಿ ಸಂಬಂಧ ಡಿಸೆಂಬರ್ ತಿಂಗಳಲ್ಲಿ ಮೂರು ಹಂತದಲ್ಲಿ ನೋಟಿಸ್ ನೀಡಲಾಗಲಿದೆ. ಮೊದಲ ನೋಟಿಸ್‌ಗೆ ಬಾಕಿ ಪಾವತಿಸಿದರೆ ದಂಡ ಮಾತ್ರ ವಸೂಲಿ ಆಗಲಿದೆ. ಎರಡನೇ ನೋಟಿಸ್‌ಗೆ ಪಾವತಿಸಿದರೆ ದಂಡದ ಜತೆಗೆ ಮೂಲ ಬಾಕಿ ತೆರಿಗೆಗೆ ಶೇ.15 ರಷ್ಟು ಬಡ್ಡಿ ಬೀಳಲಿದೆ. ಮೂರನೇ ನೋಟಿಸ್‌ಗೆ ಪಾವತಿಸಿದರೆ ದಂಡದ ಜತೆಗೆ ಮೂಲ ಬಾಕಿಗೆ ಶೇ.25 ರಷ್ಟು ಬಡ್ಡಿ ವಸೂಲಿ ಆಗಲಿದೆ. ಅಲ್ಲದೇ ಮೂರು ನೋಟಿಸ್‌ಗೂ ತೆರಿಗೆ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಮೊರೆಗೆ ಪಾಲಿಕೆ ಹೋಗಲಿದೆ.
ಬಾಕಿ ತೆರಿಗೆ ಪಾವತಿಗೆ ಬಿಬಿಎಂಪಿ ಹಲವು ಅವಕಾಶ ನೀಡಿದರೂ ಕೂಡ ತೆರಿಗೆ ಪಾವತಿದಾರರು ನಿರ್ಲಕ್ಷ್ಯ ವಹಿಸುತ್ತಿದ್ದು, ಸದ್ಯ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now