ಬೆಂಗಳೂರು: ವಿಮ್ಸ್‌ನಲ್ಲಿ ಬಾಣಂತಿ ಸಾವು ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ಕೂಡ್ಲಿಗಿ ಮೂಲದ ಬಾಣಂತಿಯ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ವಸತಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಮಾಹಿತಿ ಪಡೆದ ಸಚಿವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ನಾಲ್ವರು ಬಾಣಂತಿಯರ ಸಾವು ಪ್ರಕರಣಕ್ಕೂ ಈ ಘಟನೆಗೆ ಸಂಬಂಧವಿಲ್ಲ. ಕೂಡ್ಲಿಗಿ ಗುಡೇಕೋಟೆ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಮಹಾಲಕ್ಷ್ಮಿ ಎಂಬವರು ವಿಮ್ಸ್ಗೆ ನ.24ರಂದು ದಾಖಲಾಗಿ 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಕುರಿತು ಆರೋಗ್ಯಾಧಿಕಾರಿಗಳಿಂದ ವರದಿ ಪಡೆಯಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.
ಸಹಜ ಹೆರಿಗೆಯಾದ ಮಹಾಲಕ್ಷ್ಮಿಗೆ ಗಂಡು ಮಗು ಜನಿಸಿತ್ತು. ಹೆರಿಗೆಯ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಕುರಿತು ಬಿಮ್ಸ್ ವೈದ್ಯ ಹಾಗೂ ನಿರ್ದೇಶಕ ಗಂಗಾಧರ ಗೌಡ ಪ್ರತಿಕ್ರಿಯೆ ನೀಡಿ, “ಮಹಾಲಕ್ಷ್ಮಿ ಅವರಿಗೆ ರಕ್ತಹೀನತೆ ಇತ್ತು.
ಮೊದಲು ಅವರನ್ನು ಕೂಡ್ಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ನಂತರ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಈ ಬಗ್ಗೆ ನಾವು ಮೊದಲೇ ತಿಳಿಸಿದ್ದೆವು. ಅಲ್ಲದೇ ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ” ಎಂದು ಹೇಳಿದರು.
ಹೀಗಾಗಿ ಐಸಿಯುನಲ್ಲಿ ದಾಖಲಿಸಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಸೋಮವಾರ (ನ.25) ರಾತ್ರಿ ಹೊಸಪೇಟೆ ಮೂಲದ ಮುಸ್ಕಾನ್ (22) ಎಂಬ ಬಾಣಂತಿ ಮೃತಪಟ್ಟಿದ್ದರು. ಅದಕ್ಕೂ ಮುನ್ನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರು ಸಾವನ್ನಪ್ಪಿದ್ದರು.