Bellary News:
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್ ಆಗಿದೆ. ಬಂದ್ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್ ಮಾತ್ರ ಓಪನ್ ಇತ್ತು. ಇವುಗಳನ್ನು 10 ಗಂಟೆ ಬಳಿಕ ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಳ್ಳಾರಿಯ ಕಂಪ್ಲಿ ತಾಲೂಕಿನಲ್ಲಿ ಇಂದು ಬಂದ್ ಹೇರಲಾಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್ ಆರಂಭಿಸಿದ್ದಾರೆ. ಬಂದ್ ಹಿನ್ನೆಲೆ ಕಂಪ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ನಗರದಾದ್ಯಂತ ಹಲವು ಕಡೆ ಅಲ್ಲಲ್ಲಿ ಪೊಲೀಸ್ ತುಕಡಿ ನಿಯೋಜನೆಗೊಂಡಿದೆ.ಕನ್ನಡಪರ ಸಂಘಟನೆಗಳು, ವ್ಯಾಪಾರಿ ಸಂಘಟನೆಗಳು ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾಲೆ ಕಾಲೇಜುಗಳಿಗೆ ಯಾವ ಸಮಸ್ಯೆ ನೀಡದೇ ಅವುಗಳು ಎಂದಿನಂತೆ ನಡೆಯಲು ಅವಕಾಶ ಮಾಡಿದ್ದಾರೆ.