ಬೆಳಗಾವಿ : ದೇಶಾದ್ಯಂತ ಗಣೇಶ ಚತುರ್ಥಿ 2024ರ ಸಂಭ್ರಮ ಜೋರಾಗಿದೆ. ಕರ್ನಾಟಕದಲ್ಲಿಯೂ ಹಲವು ಕಡೆ ಗಣೇಶೋತ್ಸವ ಆಚರಣೆ ಮಾಡುವ ಸಮಿತಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿವೆ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗಾವಿಯಲ್ಲಿಯೂ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶನಿವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪರಿಸರ ಸ್ನೇಹಿಯಾದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಕ್ಕೂ ಮೊದಲು ಅವರು ಗಣೇಶ ಮೂರ್ತಿಗೆ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು: !
ಪ್ರತಿ ವರ್ಷವೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪತ್ನಿ ಅಂಕಿತಾ, ಪುತ್ರ ಹಾಗೂ ಕಚೇರಿಯ ಸಿಬ್ಬಂದಿಗಳ ಜೊತೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಅವರ ಹಿನ್ನಲೆ :
ಹೊಸದಾಗಿ ಆಗಮಿಸಿರುವ ಜಿಲ್ಲಾಧಿಕಾರಿ: ಜುಲೈ ತಿಂಗಳಿನಲ್ಲಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ನಿತೇಶ ಪಾಟೀಲ ಜಿಲ್ಲಾಧಿಕಾರಿಯಾಗಿದ್ದರು. ಸರ್ಕಾರ ಅವರನ್ನು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಮೊಹಮ್ಮದ್ ರೋಷನ್ ನೇಮಕ ಮಾಡಿತ್ತು.
2015ನೇ ಬ್ಯಾಚ್ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಮೊದಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮೊಹಮ್ಮದ್ ರೋಷನ್ ಬಿ.ಟೆಕ್ ಹಾಗೂ ಎಂಬಿಎ (ಫೈನಾನ್ಸ್), ಎಂಎ (ಪಬ್ಲಿಕ್ ಪಾಲಿಸಿ) ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. 5.7.2024 ರಂದು ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ.
ಹೆಸ್ಕಾಂ, ಪೊಲೀಸ್, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಯಾ ಪೊಲೀಸ್ ಠಾಣೆಯ ಏಕಗವಾಕ್ಷಿ ಕೇಂದ್ರದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಉಪಸ್ಥಿತರಿದ್ದು, ಅಗತ್ಯ ಅನುಮತಿಯನ್ನು ನೀಡುತ್ತಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಗಣೇಶ ಮಂಟಪಗಳನ್ನು ನಿರ್ಮಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸಾರ್ವಜನಿಕರ ಸಂಚಾರಕ್ಕೆ, ಮಹಾನಗರ ಪಾಲಿಕೆಯ ಕಸ ವಿಲೇವಾರಿ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಮಂಟಪದ ಅಳತೆಯು ಮಿತಿಯೊಳಗೆ ಇರುವಂತೆ ಅಧಿಕಾರಿಗಳು ನಿಗಾವಹಿಸಬೇಕು. ಗಣೇಶ ಮೂರ್ತಿಗಳ ಆಗಮನ ಹಾಗೂ ವಿಸರ್ಜನೆ ಸಂದರ್ಭದಲ್ಲಿ ರಸ್ತೆಯಲ್ಲಿನ ವಿದ್ಯುತ್ ಹಾಗೂ ವಿವಿಧ ದೂರ ಸಂಪರ್ಕ ಕೇಬಲ್‌ಗಳನ್ನು ಮೇಲಸ್ಥರಕ್ಕೆ ಎತ್ತರಿಸಲು, ಅರಣ್ಯ ಇಲಾಖೆ ವತಿಯಿಂದ ರೆಂಬೆಗಳನ್ನು ಕತ್ತರಿಸಲು ಕ್ರಮವಹಿಸಲು ಸೂಚಿಸಲಾಗಿದೆ.
ಪಾಲಿಕೆ ವತಿಯಿಂದ ಗಣೇಶ ಆಗಮನ ಹಾಗೂ ವಿಸರ್ಜನೆ ಮಾರ್ಗದಲ್ಲಿನ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕತ್ತಲೆ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ, ಕಣ್ಗಾವಲು ಸ್ಥಾವರ ಹಾಗೂ ಸಾರ್ವಜನಿಕರ ಗ್ಯಾಲರಿ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದ್ದಾರೆ.