ಬೆಂಗಳೂರು: ಬೇಲೇಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ನಾಪತ್ತೆ ಮತ್ತು ರಫ್ತು ಮಾಡಿದ ಪ್ರಕರಣದಲ್ಲಿ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ ಅಮಾನತಿನಲ್ಲಿಟ್ಟಿದೆ. ಅಲ್ಲದೆ, ಮುಂದಿನ 6 ವಾರಗಳಲ್ಲಿ ಒಟ್ಟು ದಂಡದ ಮೊತ್ತದಲ್ಲಿ ಶೇ.25ರಷ್ಟನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸೂಚಿಸಿದೆ.
ಪ್ರಕರಣದ ಅರೋಪಿಗಳಿಗೆ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಖಾರದಪುಡಿ ಮಹೇಶ್, ಮೆಸರ್ಸ್ ಲಾಲ್ ಮಹಲ್ ಲಿಮಿಟೆಡ್ ಮತ್ತು ಅದರ ಮಾಲೀಕ ಪ್ರೇಮ್ ಚಂದ್ ಗರ್ಗ್, ಮೆಸರ್ಸ್ ಸ್ವಸ್ಥಿಕ್ ಸ್ಟೀಲ್ ಪ್ರೇವೇಟ್ ಲಿಮಿಟೆಡ್, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರವೇಟ್ ಲಿಮಿಟೆಡ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಮಧ್ಯಂತರ ಆದೇಶ ನೀಡಿದೆ. ಈ ಆದೇಶದಿಂದ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಲಿದ್ದಾರೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ವಿಚಾರಣೆ ವೇಳೆ ಆಶಾಪುರಂ ಮೈನ್‌ಚೆಮ್‌ನ ಚೇತನ್ ಶಾ ಪರ ವಾದ ಮಂಡಿಸಿದ ವಕೀಲರು, ”ಅರ್ಜಿದಾರರ ಎಲ್ಲ ರೀತಿಯ ರಾಯಧನ ಪಾವತಿ ಮಾಡಿದ್ದಾರೆ. ಜೊತೆಗೆ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಆದರೂ ಅರ್ಜಿದಾರರನ್ನು ಆರೋಪಿಯನ್ನಾಗಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.
ಖಾರದ ಪುಡಿ ಮಹೇಶ್ ಮತ್ತು ಸತೀಶ್ ಸೈಲ್ ಪರ ವಕೀಲರು, ”ಪ್ರಕರಣದ ವಿಚಾರಣಾ ಹಂತದಲ್ಲಿ ಶಿಕ್ಷೆಯನ್ನು ಅಮಾನತ್ತಿನಲ್ಲಿಡಬೇಕು ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಈ ನಿಟ್ಟಿನಲ್ಲಿ ಶಿಕ್ಷೆ ಅಮಾನತ್ತಿನಲ್ಲಿಡಬೇಕು” ಎಂದು ಕೋರಿದರು.
”ಅಲ್ಲದೆ, ಅದಿರು ಖರೀದಿ ಮಾಡಿರುವ ಸಂಬಂಧ ಮಾರಾಟ ಮಾಡಿರುವವರಿಗೆ ಹಣವನ್ನು ಬ್ಯಾಂಕ್ ಮೂಲಕವೇ ಪಾವತಿ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಲಾಗಿದೆ. ಆದರೆ, ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಅಷ್ಟು ಹೇಗೆ ಪಾವತಿ ಮಾಡುವುದು” ಎಂದು ಪ್ರಶ್ನೆ ಮಾಡಿದರು.
ಸಿಬಿಐ ಪರ ವಕೀಲರ ವಾದ: ”ಅರ್ಜಿದಾರರ ವಿರುದ್ಧದ ವಿವಿಧ ಆರೋಪಗಳಿಗೆ ಕನಿಷ್ಠ 49 ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಏಕಕಾಲಕ್ಕೆ ಶಿಕ್ಷೆ ಅನುಭವಿಸಬೇಕು ಎಂದು ವಿಚಾರಣಾ ನ್ಯಾಯಾಲಯ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ. ಹೀಗಾಗಿ, ದಂಡ ಪಾವತಿಯಿಂದ ವಿನಾಯ್ತಿ ನೀಡಬಾರದು” ಎಂದು ಸಿಬಿಐ ಪರ ವಾದ ಮಂಡಿಸಿದ ವಕೀಲರು ಪೀಠಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ಶಿಕ್ಷೆ ಅಮಾನತಿನಲ್ಲಿಡುವುದು ಮತ್ತು ಜಾಮೀನು ನೀಡುವ ಸಂಬಂಧ ದಿನದಾಂತ್ಯಕ್ಕೆ ಆದೇಶ ಪ್ರಕಟಿಸುವುದಾಗಿ ಪೀಠ ತಿಳಿಸಿ ವಿಚಾರಣೆಯನ್ನು ಮುಂದೂಡಿತು.