ನವದೆಹಲಿ: ಭಾರತ್ ಬ್ರ್ಯಾಂಡ್ ನಡಿ ರಿಯಾಯಿತಿ ದರದಲ್ಲಿ ಅಕ್ಕಿ ಮತ್ತು ಗೋಧಿ ಹಿಟ್ಟು ಮಾರಾಟದ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
ಮೊದಲನೇ ಹಂತದಲ್ಲಿ ಗೋಧಿ ಹಿಟ್ಟಿಗೆ 27 ರೂ., ಅಕ್ಕಿಗೆ 29 ರೂ. ದರ ನಿಗದಿಪಡಿಸಲಾಗಿತ್ತು. ಎರಡನೇ ಹಂತದಲ್ಲಿ ದರ ಸ್ವಲ್ಪ ಹೆಚ್ಚಾಗಿದೆ. ಈ ಬಾರಿ ಗೋಧಿ ಹಿಟ್ಟು ಕೆಜಿಗೆ 30 ರೂ.ದರದಲ್ಲಿ, ಅಕ್ಕಿಯನ್ನು ಕೆಜಿಗೆ 34 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಪ್ರಸ್ತುತ ಅಕ್ಕಿ ಮತ್ತು ಗೋಧಿ ಹಿಟ್ಟು 5 ಕೆಜಿ, 10 ಕೆಜಿ ಪ್ಯಾಕ್ ಗಳಲ್ಲಿ ಲಭ್ಯವಿದೆ. ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಲ್ಲಿ ಸಣ್ಣ ಗಾತ್ರದ ಪ್ಯಾಕೆಟ್ ಗಳಲ್ಲಿಯೂ ಅಕ್ಕಿ, ಗೋಧಿಹಿಟ್ಟು ಪೂರೈಕೆ ಮಾಡಲಾಗುತ್ತದೆ.
ಭಾರತೀಯ ಆಹಾರ ನಿಗಮದಿಂದ 3.69 ಲಕ್ಷ ಟನ್ ಗೋಧಿ ಮತ್ತು 2.61 ಲಕ್ಷ ಅಕ್ಕಿಯನ್ನು ಕಾಯ್ದಿರಿಸಲಾಗಿದೆ.
ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ(ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ(ನಾಫೆಡ್), ಕೇಂದ್ರೀಯ ಭಂಡಾರ ಮತ್ತು ಇ-ಕಾಮರ್ಸ್ ವೇದಿಕೆಗಳಲ್ಲಿ ಇವುಗಳನ್ನು ಮಾರಾಟ ಮಾಡಲಾಗುವುದು.
ಚಿಲ್ಲರೆ ಮಾರಾಟಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿ ಮಾತನಾಡಿ, ಭಾರತ್ ಬ್ರಾಂಡ್ ನಡಿ ಅಕ್ಕಿ ಗೋಧಿಯನ್ನು ಭಾರತೀಯ ಆಹಾರ ನಿಗಮದಿಂದ ಬೆಲೆ ಸ್ಥಿರೀಕರಣ ನಿಧಿ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಒದಗಿಸಲು, ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಣ ಉದ್ದೇಶದಿಂದ ಭಾರತ್ ಬ್ರ್ಯಾಂಡ್ ಹೆಸರಲ್ಲಿ ಗೋಧಿ ಹಿಟ್ಟು, ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.