ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಮಹಿಳೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬನಶಂಕರಿ ಪೊಲೀಸರು ಚುರುಕುಗೊಳಿಸಿದ್ದಾರೆ.
ಪೊಲೀಸರು ಶೀಘ್ರದಲ್ಲೇ ಆತ್ಮಹತ್ಯೆ ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಿದ್ದಾರೆ. ಹೆಚ್ಚಿನ ತನಿಖೆಗಾಗಿ ತನಿಖಾಧಿಕಾರಿಗೆ (ಐಒ) ನೋಟಿಸ್ ನೀಡಲಿದ್ದಾರೆ. ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಜೀವಾ 11 ಪುಟಗಳ ಡೆತ್ ನೋಟ್ ಅನ್ನು ತಮ್ಮ ನಿವಾಸದಲ್ಲಿ ಬಿಟ್ಟು ಹೋಗಿದ್ದಾರೆ.
ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ವಿರುದ್ಧ ಅವರ ಸಹೋದರಿ ಸಂಗೀತಾ ಹಲವು ಆರೋಪ ಮಾಡಿದ್ದಾರೆ. ಎಲ್ಲಾ ದಾಖಲಾತಿಗಳನ್ನು ಒದಗಿಸಿದ್ದರೂ 25 ಲಕ್ಷ ಹಣ ಕೊಡು. ಇಲ್ಲವಾದರೆ ನೀವೆಲ್ಲಾ ಯಾಕೆ ಬದುಕಬೇಕು, ಹೋಗಿ ಸಾಯಿರಿ ಎಂದು ನಿಂದಿಸಿದ್ದರು. ಅಂಗಡಿ ಪರಿಶೀಲಿಸಿ ಎಲ್ಲರ ಮುಂದೆ ಅವಮಾನ ಮಾಡಿದ್ದರು.
ನವೆಂಬರ್ 14 ಮತ್ತು 21ರಂದು ಇಡೀ ದಿನ ವಿಚಾರಣೆ ವೇಳೆ ಮಾನಸಿಕ ಕಿರುಕುಳ ನೀಡಿದ್ದರು. ಅಕ್ಕ ಆತ್ಮಹತ್ಯೆಗೂ ಮುನ್ನ 11 ಪುಟಗಳ ಪತ್ರ ಬರೆದಿದ್ದು, ಅಕ್ಕನ ಸಾವಿಗೆ ಕಾರಣರಾದ ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಜೀವಾ ಅವರು ಪದ್ಮನಾಭನಗರದಲ್ಲಿ ಸಹೋದರಿ ಸಂಗೀತಾ ಜತೆ ವಾಸಿಸು ತ್ತಿದ್ದರು. ಸಂಗೀತಾ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಶುಕ್ರವಾರ ಬೆಳಿಗ್ಗೆ ಜೀವಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಎಫ್ಐಆರ್ ಪ್ರಕಾರ, ಕನಕಲಕ್ಷ್ಮಿ ಜೀವಾಗೆ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದರು. ನೀವು ಸೈನೈಡ್ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಡಿವೈಎಸ್ಪಿ ಕೂಡ 25 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
11 ಪುಟಗಳ ಡೆತ್ ನೋಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು ಮತ್ತು ಜೀವಾ ಅವರ ಕೈಬರಹದ ಮಾದರಿಯನ್ನು ಸಹ ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು.
ವಿಚಾರಣೆಗೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಕನಕಲಕ್ಷ್ಮಿ ವಿರುದ್ಧ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.