ಹೂವಿನಹಡಗಲಿ (ವಿಜಯನಗರ): ಕಾಮಗಾರಿಗಳಲ್ಲಿ ಕಳ್ಳ ಲೆಕ್ಕಗಳನ್ನು ತೋರಿಸಿ, ಹೆಚ್ಚುವರಿ ಬಿಲ್ ಸೃಷ್ಟಿಸುವುದು ಹೊಸ ಸಂಗತಿಯೇನಲ್ಲ. ಆದರೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಯಾವ ಕಾಮಗಾರಿಯೂ ನಡೆಯದೆ ಇದ್ದರೂ, ಕೆಆರ್‌ಐಡಿಎಲ್ 2.71 ಕೋಟಿ ರೂ ಮೌಲ್ಯದ ಬಿಲ್ ಪಾವತಿಸಿದೆ.
ಈ ಸಂಬಂಧ ಎಇಇಗೆ ನೋಟಿಸ್ ಜಾರಿ ಮಾಡಿದ್ದರೂ, ಅವರು ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೇ ಹೋಗಿಲ್ಲ.
ಕಾಮಗಾರಿಯ ಹೆಸರಿಲ್ಲ, ಸಾಮಗ್ರಿ, ಅಂದಾಜು ದರ ಪಟ್ಟಿಯೂ ಇಲ್ಲ! ಆದರೂ ಬರೋಬ್ಬರಿ 2,71,57,194 ರೂ. ಪಾವತಿಸುವ ಮೂಲಕ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಜಾದೂ ಮಾಡಿದೆ!ಕೆಆರ್‌ಐಡಿಎಲ್ ಸ್ಥಳೀಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಹೊಸಪೇಟೆಯ ವಿಭಾಗೀಯ ಕಚೇರಿಯಿಂದ ಈ ಕುರಿತು ಕಾರಣ ಕೇಳಿ ನೋಟಿಸ್ ಜಾರಿಯಾಗಿರುವುದು, ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಿ ನುಡಿಯುತ್ತಿದೆ. ಈ ಕುರಿತ ದಾಖಲೆಗಳು ‘ವಿಕ’ಕ್ಕೆ ಲಭ್ಯವಾಗಿವೆ.
ನಿಗಮದ ನಿಯಮಗಳ ಪ್ರಕಾರ ಯಾವುದೇ ಕಾಮಗಾರಿಗೆ ಹಣ ಪಾವತಿಸಬೇಕಿದ್ದರೆ, ಆರಂಭದ ಹಂತವಾಗಿ ಆಡಳಿತಾತ್ಮಕ, ತಾಂತ್ರಿಕ ಹಾಗೂ ಕೂಲಿ ದರ ಪಟ್ಟಿಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಅನುಮೋದನೆ ಪಡೆದಿರಬೇಕು.
ಜತೆಗೆ ಕಾಮಗಾರಿ ಗುಣಮಟ್ಟದ ಪರೀಕ್ಷೆ, ನಾನಾ ಹಂತದ ಜಿಪಿಎಸ್ ಫೋಟೊ, ಕಾಮಗಾರಿ ಪ್ರಮಾಣ ಸೇರಿ ಇತರ ಅಧಿಕೃತ ದಾಖಲೆಗಳನ್ನು ಕಾರ್ಯಪಾಲಕ ಎಂಜಿನಿಯರ್ ಬಳಿ ಚರ್ಚಿಸಿ, ಲೆಕ್ಕಪತ್ರ ಆಡಿಟ್ ಮತ್ತು ಕಚೇರಿಯಲ್ಲಿ ಅನುಮೋದನೆಯಾದ ಬಳಿಕವಷ್ಟೇ ಹಣ ಸಂದಾಯಕ್ಕೆ ಕ್ರಮ ಕೈಗೊಳ್ಳಬೇಕು.
ಯಾವುದೇ ಉದ್ದಿಮೆಗಳಿಗೆ ಹಣ ಪಾವತಿಸುವುದಕ್ಕೂ ಮುಂಚೆ ಉದ್ದಿಮೆದಾರರು ಸರಬರಾಜು ಮಾಡುವ ಸಾಮಗ್ರಿಗಳ ಕೊಟೇಶನ್ ಹಾಗೂ ತುಲನಾತ್ಮಕ ಪಟ್ಟಿಗಳಿಗೆ ಖರೀದಿ ಸಮಿತಿಯಿಂದ ಅನುಮೋದನೆ ಪಡೆಯಬೇಕು.
ಆದರೆ, ಯಾವುದೇ ದಾಖಲೆಗಳನ್ನು ಸಲ್ಲಿಸದೆಯೇ ಒಟ್ಟು 2,71,57,194 ರೂ.ಗಳನ್ನು ಸ್ಟೀಲ್ ಮತ್ತು ಸಿಮೆಂಟ್ ಉದ್ದಿಮೆದಾರರಿಗೆ ಪಾವತಿಸಲಾಗಿದೆ. ಇದರಲ್ಲಿ 2,01,07,805 ರೂ.ಗಳನ್ನು ತಮಗೆ ಅನುಕೂಲಕರವಾಗಿರುವ ಎರಡು ಉದ್ದಿಮೆಗಳ ಒಬ್ಬ ಮಾಲೀಕನಿಗೆ ನೇರವಾಗಿ ಚೆಕ್ ಮೂಲಕ ನೀಡಲಾಗಿದೆ.
ಹಣ ಪಾವತಿಯಲ್ಲಿ ನಿಗಮದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸ್ಥಳೀಯ ಎಇಇಗೆ ನೀಡಿರುವ ನೋಟಿಸ್‌ನಲ್ಲಿ ಕಾರ್ಯಪಾಲಕ ಎಂಜಿನಿಯರ್ ಗಮನಸೆಳೆದಿದ್ದಾರೆ.
ಹಣ ಪಾವತಿಸಿದ ಕುರಿತು ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ನೀಡಿದ್ದ ಕಾಲಾವಕಾಶ ಮೀರಿ, ನಂತರವೂ ಕಚೇರಿಗೆ ಕೆಆರ್‌ಐಡಿಎಲ್ ಸ್ಥಳೀಯ ಎಇಇ ದಾಖಲೆಗಳನ್ನು ಸಲ್ಲಿಸಿಲ್ಲ.
ಕರ್ತವ್ಯ ಲೋಪ, ಹಣ ಪಾವತಿ ಮಾಡಿರುವ ಕುರಿತು ನ.7ರೊಳಗೆ ಖುದ್ದಾಗಿ ಕಚೇರಿಗೆ ಬಂದು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವುದಾಗಿಯೂ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಎಇಇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೆಆರ್‌ಐಡಿಎಲ್ ಮೂಲಗಳು ತಿಳಿಸಿವೆ.