ಶಿವಮೊಗ್ಗ: ಬಿಜೆಪಿಯೊಳಗಿನ ಎಲ್ಲ ಗೊಂದಲಗಳಿಗೆ ನಾಳೆ ತೆರೆ ಬೀಳಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ವಿನೋಬನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾಳೆ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಶಾಸಕ ಯತ್ನಾಳ್ ಅವರ ಬಗ್ಗೆ ಚರ್ಚೆ ನಡೆಯುವ ಕುರಿತು ನನಗೆ ಮಾಹಿತಿ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ. ಇದನ್ನು ಯತ್ನಾಳ್ ಅವರೂ ಒಪ್ಪಿಕೊಳ್ಳುತ್ತಾರೆ ಎಂದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಯಡಿಯೂರಪ್ಪನವರ ಹೆಸರಿನ ಮೇಲೆ ಎಂದಿರುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಕೇಂದ್ರದ ನಾಯಕರು, ನಾವ್ಯಾರೂ ಅಲ್ಲ. ಅವರು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನ ಅವರ ಓಡಾಟ ಮತ್ತು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಮೊನ್ನೆಯ ಮೂರು ಜಿಲ್ಲೆಗಳ ಪ್ರವಾಸದ ವೇಳೆ ಅವರಿಗೆ ಸಿಕ್ಕ ಜನಬೆಂಬಲ ಯಾವ ರೀತಿ ಇದೆ ಎಂಬುದನ್ನು ಗಮನಿಸಿದ್ದಾರೆ ಎಂದರು.
ಅಧಿವೇಶನವನ್ನು ಯಾವುದೇ ಗೊಂದಲವಿಲ್ಲದೆ ನಾವೆಲ್ಲ ಒಟ್ಟಾಗಿ ಎದುರಿಸುತ್ತೇವೆ. ಸರ್ಕಾರದ ಹಗರಣಗಳನ್ನು ಬಯಲು ಮಾಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ಇ.ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ಚರ್ಚೆ ಆಗಲಿದೆ ಎಂದು ಹೇಳಿದರು.
ಮನುಷ್ಯನ ಸ್ವಭಾವದ ವೀಕ್ನೆಸ್ ಎಲ್ಲರಿಗೂ ಇರುತ್ತದೆ. ಯತ್ನಾಳ್ ನನ್ನ ಹಾಗೂ ನಮ್ಮ ಪುತ್ರರನ್ನು ಟಾರ್ಗೆಟ್ ಮಾಡುತ್ತಿರಬಹುದು. ಆ ಬಗ್ಗೆ ನನಗೇನೂ ಅಭ್ಯಂತರ ಇಲ್ಲ. ಆದರೆ, ನನ್ನ ಉದ್ದೇಶ ನಾವೆಲ್ಲ ಒಟ್ಟಾಗಿ ಹೋಗಬೇಕೆಂಬುದಾಗಿದೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವೇ ಹೊರತು, ನಾವು ನಾವೇ ಬಡದಾಡಿಕೊಳ್ಳುವುದಲ್ಲ. ಇದು ಹೆಚ್ಚು ಶಕ್ತಿಯನ್ನು ನೀಡುವುದಿಲ್ಲ. ಅದಕ್ಕಾಗಿ ಎಲ್ಲವನ್ನೂ ಮರೆತು ಒಟ್ಟಾಗಿ ಹೋಗಬೇಕು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now