ಬೆಂಗಳೂರು: ಅಂಧತ್ವ ಹೊಂದಿರುವ ಮಹಿಳೆಗೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಹೈಕೋರ್ಟ್ ಆದೇಶ ಹೊರಡಿಸಿದ್ದಾರೆ.
ದೃಷ್ಟಿಹೀನ ವ್ಯಕ್ತಿಗಳಾಗಿದ್ದೂ ಶ್ರೇಷ್ಠ ಸಾಧನೆ ಮಾಡಿದ ಹೋಮರ್, ಹೆಲೆನ್ ಕೆಲ್ಲರ್ ಮತ್ತು ಲೂಯಿಸ್ ಬ್ರೈಲ್ ಅವರ ಜೀವನದಲ್ಲಿನ ಸಾಧನೆಯನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಶಿಕ್ಷಕರು ತಮ್ಮ ಕರ್ತವ್ಯ (ಸಮಾಜ ವಿಜ್ಞಾನ, ಭಾಷಾ ವಿಷಯ ಬೋಧನೆ) ನಿರ್ವಹಿಸುವುದಕ್ಕೆ ಅಂಧತ್ವ ಅಡ್ಡಿಯಾಗದು ಎಂದು ತಿಳಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಕೆಎಟಿ ಆದೇಶವನ್ನು ಎತ್ತಿ ಹಿಡಿದಿದೆ.
ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ ಅಂಧರ ಉದಾಹರಣೆಗಳು ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿ.ಪೂ 900ರಲ್ಲಿ ಹೋಮರ್ ಮಹಾಕಾವ್ಯಗಳನ್ನು ರಚನೆ ಮಾಡಿದ್ದಾರೆ. ಲೂಯಿಸ್ ಬ್ರೈಲ್ ಅವರು ಅಂಧರಿಗಾಗಿಯೇ ಬ್ರೈಲ್ ಲಿಪಿಯನ್ನು ಆವಿಷ್ಕಾರ ಮಾಡಿದ್ದರು ಎಂಬ ಮಾಹಿತಿಯನ್ನು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸಂಪೂರ್ಣ (ಶೇ.100ರಷ್ಟು) ಅಂಧತ್ವಕ್ಕೆ ಗುರಿಯಾಗಿರುವ ಹೆಚ್.ಎನ್.ಲತಾ ಎಂಬವರಿಗೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಸಾಮಾನ್ಯ ಶಿಕ್ಷಕರು ಮಾಡುವ ಕೆಲಸವನ್ನು ಸಂಪೂರ್ಣ ಅಂಧತ್ವ ಹೊಂದಿರುವ ವ್ಯಕ್ತಿಗಳು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಪದವೀಧರರ ಪ್ರಾಥಮಿಕ ಶಿಕ್ಷಕರ (ಸಮಾಜ ವಿಜ್ಞಾನ, ಭಾಷಾ ವಿಷಯ ಬೋಧನೆ) ಹುದ್ದೆಗೆ ಕಡಿಮೆ ದೃಷ್ಟಿ ದೋಷವುಳ್ಳವರೊಂದಿಗೆ ಅರ್ಜಿದಾರ ಲತಾ ಅವರನ್ನೂ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಅಂಧತ್ವ ಹೊಂದಿರುವವರು ಹಲವು ರೀತಿಯಲ್ಲಿ ಚುರುಕಾಗಿರಲಿದ್ದಾರೆ ಎಂದು ತಿಳಿಸಿರುವ ಪೀಠ, ಇತರರೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ, ದಿನನಿತ್ಯ ಎದುರಾಗುವ ಸಮಸ್ಯೆಗಳನ್ನು ನಿರ್ವಹಣೆ, ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವ ಕೌಶಲ್ಯ, ಬಲವಾದ ಆಲಿಸುವ ಶಕ್ತಿ, ಅತ್ಯುತ್ತಮ ಜ್ಞಾಪನಾ ಶಕ್ತಿ, ನೆನಪಿಟ್ಟುಕೊಳ್ಳುವ ಸಾಮರ್ಥ್ಯ, ಗುರಿ ಮುಟ್ಟುವಲ್ಲಿ ಬದ್ಧತೆ, ಶ್ರವಣ ಸ್ಪರ್ಶ ಮತ್ತು ವಾಸನೆಯನ್ನು ಕಂಡುಹಿಡಿಯುವ ಇಂದ್ರಿಯಗಳ ಚುರುಕುತನವನ್ನು ಹೊಂದಿರಲಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಂಧರಿಗೆ ಕೆಲವು ಹುದ್ದೆಗಳನ್ನು ಮೀಸಲಿಡಬೇಕಾದ ಪ್ರಾಧಿಕಾರ ಶಿಕ್ಷಕರ ಹುದ್ದೆಗೆ ಕಡಿಮೆ ದೃಷ್ಟಿಹೊಂದಿರುವ ವ್ಯಕ್ತಿಗಳೊಂದಿಗೆ ಸಂಪೂರ್ಣ ಅಂಧತ್ವಕ್ಕೆ ಗುರಿಯಾದವರಿಗೂ ಭಾಗವಹಿಸುವುದಕ್ಕೆ ಅವಕಾಶ ನೀಡಬೇಕಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ವಿಕಲಚೇತನರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಅವಕಾಶ ನೀಡುವ) ಕಾಯಿದೆ 1995 ಮತ್ತು ಅಂಗವಿಕಲರ ಕಾಯಿದೆ 2016 ಅನ್ನು ಉಲ್ಲಂಘಿಸಲಿದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ನ್ಯಾಯಾಲಯ ಮತ್ತು ನ್ಯಾಯಮಂಡಳಿಗಳು ಕಾನೂನು, ನ್ಯಾಯದ ಅಗತ್ಯತೆ ಮತ್ತು ಅದಕ್ಕೆ ಕಾರಣಗಳ ಮೂಲಕ ಪರಿಹಾರವನ್ನು ರೂಪಿಸಬೇಕಾಗಿದೆ. ಅದನ್ನು ಕೆಎಟಿ ಮಾಡಿದೆ ಎಂದು ತಿಳಿಸಿದ ಪೀಠ, ಪ್ರಸ್ತುತ ಪ್ರಕರಣದಲ್ಲಿ ನ್ಯಾಯಮಂಡಳಿ ಅಲ್ಪ ದೃಷ್ಟಿದೋಷವುಳ್ಳವನ್ನು ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಪಡಿಸಿಲ್ಲ. ಬದಲಾಗಿ ಸಂಪೂರ್ಣವಾಗಿ ಅಂಧರಾದವರಿಗೂ ಅವಕಾಶವನ್ನು ನೀಡುವ ಮೂಲಕ ಹೆಚ್ಚು ದೃಷ್ಟಿದೋಷವುಳ್ಳವರೂ ಭಾಗಿಯಾಗಲು ಅವಕಾಶ ಕಲ್ಪಿಸಿದೆ ಎಂದಿದೆ.
ಮಾಧ್ಯಮಿಕ ಶಾಲಾ ಸಹಾಯಕ ದರ್ಜೆ-2, ಸಹಾಯಕ ಶಿಕ್ಷಕ (ಕಲೆ ಮತ್ತು ಭಾಷೆ) ಹುದ್ದೆಗಳ ಭರ್ತಿಗೆ, 2011ರಲ್ಲಿ ಸರ್ಕಾರ ಹೊರಡಿಸಿದ ಆಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವವರು ಕಡಿಮೆ ಅಂಧತ್ವ ಹೊಂದಿರುವ ಅಭ್ಯರ್ಥಿಗಳಾಗಬಹುದು ಎಂಬುದಾಗಿ ತಿಳಿಸಲಾಗಿದೆ. ಆದರೆ, ಈ ರೀತಿಯ ಪಠ್ಯ ಬೋಧನೆ ಮತ್ತು ವೃತ್ತಿಯನ್ನು ನಿರ್ವಹಣೆ ಮಾಡಲು ಸಂಪೂರ್ಣ ಅಂಧತ್ವವುಳ್ಳವರಿಗೆ ಹೇಗೆ ಅಡ್ಡಿಯಾಗುತ್ತದೆ ಎಂದು ಪೀಠ ಇದೇ ವೇಳೆ ಪ್ರಶ್ನಿಸಿದೆ.
2022ರ ಅಧಿಸೂಚನೆಯಲ್ಲಿ ಅಂಧರಿಗೆ ಮೀಸಲಾತಿ ನೀಡದಿದ್ದಲ್ಲಿ ಸರ್ಕಾರದ ವಾದವನ್ನು ಒಪ್ಪಬಹುದಾಗಿದೆ. ಆದರೆ, ಕಡಿಮೆ ದೃಷ್ಟಿದೋಷವುಳ್ಳವರಿಗೆ ಮಾತ್ರ ಮೀಸಲಿಟ್ಟಿದ್ದು, ಸಂಪೂರ್ಣ ಅಂಧತ್ವ ಹೊಂದಿರುವವರಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬುದನ್ನು ಒಪ್ಪಲಾಗುವುದಿಲ್ಲ ಎಂದು ಪೀಠ ಹೇಳಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now