ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಳೆದ ಮೂರು ತಿಂಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಮತ್ತು ಮಹಿಳೆಯರಿಗೆ ಮಾತ್ರ ಮೀಸಲಾದ ಆಸನಗಳಲ್ಲಿ ಪ್ರಯಾಣಿಸಿದ 10,069 ಪ್ರಯಾಣಿಕರಿಂದ 19 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 10,069 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ ಮತ್ತು 19,13,830 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಬಿಟಿಎಂಸಿ ಹೇಳಿದೆ.
ಬಿಎಂಟಿಸಿ ಕಳೆದ ಮೂರು ತಿಂಗಳಲ್ಲಿ 10 ಸಾವಿರ ಪ್ರಯಾಣಿಕರಿಂದ 19 ಲಕ್ಷ ರೂ ದಂಡ ಸಂಗ್ರಹಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಂಸ್ಥೆ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಪಾಸಣಾ ಸಿಬ್ಬಂದಿ 57,219 ಟ್ರಿಪ್‌ಗಳನ್ನು ಪರಿಶೀಲಿಸಿದ್ದು 8,891 ಟಿಕೆಟ್‌ರಹಿತ ಪ್ರಯಾಣಿಕರಿಂದ ದಂಡವಾಗಿ 17,96,030 ರೂಪಾಯಿ ದಂಡ ವಿಧಿಸಿದ್ದಾರೆ.
ತನಿಖಾ ಸಿಬ್ಬಂದಿಗೆ ನಿತ್ಯ ಇಂತಿಷ್ಟು ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿ ದಂಡ ವಿಧಿಸಬೇಕೆಂಬ ಟಾರ್ಗೆಟ್ (ಗುರಿ) ನೀಡಲಾಗಿದೆ. ಅದರಂತೆ ನಿತ್ಯ ಪ್ರತಿಯೊಬ್ಬರು 30 ಮಂದಿ ಟಿಕೆಟ್‌ರಹಿತರನ್ನು ಪತ್ತೆ ಮಾಡಿ, ದಂಡ ವಸೂಲಿ ಮಾಡಬೇಕು. ಹಾಗೆಯೇ ನಿರ್ವಾಹಕರ ವಿರುದ್ಧ ಮೂರು ಕೆಂಪು ಪಟ್ಟಿ ಪ್ರಕರಣ ದಾಖಲಿಸಬೇಕಿದೆ.
ಟಿಕೆಟ್ ನೀಡದ ಮತ್ತು ಹಣ ಪಡೆಯದ ಪ್ರಕರಣಗಳಿಗೆ ನಿರ್ವಾಹಕರಿಗೆ ಎನ್‌ಐಎನ್‌ಸಿ (non issued non collected) ಹಾಗೂ ಟಿಕೆಟ್ ನೀಡದೆ, ಹಣ ಪಡೆಯುವ ಪ್ರಕರಣಗಳಲ್ಲಿ ಎನ್‌ಐಎಸಿ (non issued ammount
collected) ನೋಟಿಸ್ ನೀಡಲಾಗುತ್ತದೆ.
ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಕೆಲವರಿಗೆ ಟಿಕೆಟ್ ನೀಡಲಾಗಿರುವುದಿಲ್ಲ. ಇನ್ನು ಕೆಲ ಪ್ರಯಾಣಿಕರು ಮರೆವಿನಿಂದ ಅಥವಾ ಉದ್ದೇಶಪೂರ್ವಕವಾಗಿಯೇ ಟಿಕೆಟ್ ಖರೀದಿಸುವುದಿಲ್ಲ. ಇದಕ್ಕೆಲ್ಲಾ ನಿರ್ವಾಹಕರನ್ನೇ ಹೊಣೆ ಮಾಡಿ ನೋಟಿಸ್ ನೀಡಿ, ವೇತನದಲ್ಲಿ ದಂಡದ ಹಣವನ್ನು ಕಡಿತ ಮಾಡಲಾಗುತ್ತದೆ ಎಂದು ನೌಕರರೊಬ್ಬರು ಅಳಲು ತೋಡಿಕೊಂಡರು.
ಪ್ರಯಾಣಿಕರು ದಿನದ ಪಾಸ್‌ಗಳಲ್ಲಿ ಸಹಿ ಮಾಡದಿದ್ದರೆ, ಗುರುತಿನ ಸಂಖ್ಯೆ ನಮೂದಿಸದಿದ್ದರೂ ನಿರ್ವಾಹಕರೇ ಅದರ ಜವಾಬ್ದಾರಿ ಹೊರಬೇಕಿದೆ. ಕೆಲವರು ಅವಧಿ ಮೀರಿದ ಗುರುತಿನ ಚೀಟಿ ಹೊಂದಿದ್ದರೂ, ಪರೀಕ್ಷಿಸದ ತಪ್ಪಿಗೆ ಕಂಡಕ್ಟರ್‌ಗಳು ದಂಡ ತೆರಬೇಕಿದೆ.
ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳಲ್ಲಿ ಕುಳಿತಿದ್ದ 1,178 ಪುರುಷ ಪ್ರಯಾಣಿಕರಿಂದ 1,17,800 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ಕರ್ತವ್ಯ ಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧ 5,268 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಟಿಕೆಟ್ ತಪಾಸಣಾ ತನಿಖಾಧಿಕಾರಿಗಳು ಹೆಚ್ಚಿನ ಪ್ರೋತ್ಸಾಹ ಧನ ಪಡೆಯಲು ಮತ್ತು ಪ್ರಕರಣ ಸಂಖ್ಯೆಯ ಗುರಿ ತಲುಪಲು ನಿರ್ವಾಹಕರಿಗೆ ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ಹಲವು ಮಂದಿ ದೂರು ನೀಡಿದ್ದಾರೆ. ನೌಕರರ ಸಂಘಗಳು ಸಹ ದೂರು ಸಲ್ಲಿಸಿವೆ.
ಹಾಗಾಗಿ, ತನಿಖಾ ಸಿಬ್ಬಂದಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ನಿಲ್ಲಿಸಲು ಚಿಂತಿಸಲಾಗಿದೆ. ಮುಂದಿನ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಪ್ರೋತ್ಸಾಹ ಧನ ನೀಡುವುದನ್ನು ನಿಲ್ಲಿಸಿದರೆ, ಸಂಸ್ಥೆಗೆ ಅಧಿಕ ಆದಾಯ ಬರುತ್ತದೆ.
ನೌಕರರು ಅನುಭವಿಸುತ್ತಿರುವ ಕಿರುಕುಳಕ್ಕೆ ಕಡಿವಾಣ ಬೀಳುತ್ತದೆ ಎಂದು ಬಿಎಂಟಿಸಿಯ ಅಧ್ಯಕ್ಷರಾದ ಎಚ್.ನಾಭಿರಾಜ್ ಜೈನ್ ಅವರು ತಿಳಿಸಿದ್ದಾರೆ.