Bangalore News:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ ಯೋಜನೆಗಳು ಅನುಷ್ಠಾನವಾಗಿಲ್ಲ ಎಂಬುದರ ಫ್ಯಾಕ್ಟ್ ಚೆಕ್ ಮಾಡಿಸಿ ಎಂದು ಕರ್ನಾಟಕ ಬಿಜೆಪಿ ಸವಾಲು ಹಾಕಿದೆ. ಕಲಬುರಗಿಯಲ್ಲಿ ತಲೆ ಎತ್ತಿರುವ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ‘ಕಲ್ಯಾಣ ಕರ್ನಾಟಕದ ಜನತೆ ಹೃದ್ರೋಗ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ದೂರದ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಮುಖ್ಯಮಂತ್ರಿ ಆಗಿದ್ದ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಸ್ಥಾಪಿಸಲು ಅನುದಾನ ನೀಡಿ, ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಆದರೆ ಇತರರ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಂಡು ಜನರಿಗೆ ಮಂಕುಬೂದಿ ಎರಚುವ ಕ್ರೆಡಿಟ್ ಕಳ್ಳ ಕರ್ನಾಕಟ ಕಾಂಗ್ರೆಸ್, ಮತ್ತದರ ನಾಯಕರು ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪಿಸಿದ್ದು ತಮ್ಮ ಸಾಧನೆ ಎಂದು ಸುಳ್ಳಾಡುತ್ತಿದ್ದಾರೆ’ ಎಂದು ಆರೋಪಿಸಿದೆ.
CM Siddaramaiah’s inauguration on December 22 :
ಬಹು ನಿರೀಕ್ಷಿತ ಕಲಬುರಗಿ ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನಾ ಸಂಸ್ಥೆ ಮತ್ತು ಆಸ್ಪತ್ರೆಯ ನೂತನ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಡಿ.22ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರು ಹೃದ್ರೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿಗೆ ತೆರಳಬೇಕಿತ್ತು. ಇದೇ ಕಾರಣದಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು. ತಾಯಿ ಮಕ್ಕಳ ಆಸ್ಪತ್ರೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಕೆಲಸ ಶುರುವಾಗಿದ್ದು, ಕಲಬುರಗಿ ಮುಂದೆ ಮೆಡಿಕಲ್ ಹಬ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 262 ಕೋಟಿ ರೂ. ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿ ಒಟ್ಟು 377.17 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಸಂವಿಧಾನದ 371ಜೆ ತಿದ್ದುಪಡಿ ಜಾರಿಯಾಗಿ ಈಗ ಹತ್ತು ವರ್ಷಗಳು ಸಂದಿವೆ. ಈ ದಶಮಾನೋತ್ಸವದ ನೆನಪಿಗಾಗಿ ಈ 371 ಹಾಸಿಗೆಯ ಜಯದೇವ ಲೋಕಾರ್ಪಣೆ ಮಾಡಲಾಗುತ್ತಿದೆ.
371 Bed Jayadeva Hospital :
ಸಿಂಗಲ್ ಬೆಡ್‌ನ ಸ್ಪೆಷಲ್ ವಾರ್ಡ್ 11 ಮತ್ತು ಸೆಮಿ ಸ್ಪೆಷಲ್ ವಾರ್ಡ್ 13 ಹಾಗೂ ಸಿಟಿ, ಎಂಆರ್‌ಐಗಳ ಸೌಲಭ್ಯ ಒಳಗೊಂಡಿದೆ. ಜಯದೇವ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳಿಗಾಗಿ 56.77 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ 40 ಕೋಟಿ ರೂ. ಅನುದಾನ ಕೆಕೆಆರ್‌ಡಿಬಿ, ಉಳಿದ 17 ಕೋಟಿ ರೂ. ಇಲಾಖೆಯಿಂದ ಭರಿಸಲಾಗಿದೆ ಎಂದರು.ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಟ್ಟು 371 ಬೆಡ್ ಒಳಗೊಂಡಿದೆ. ನಾಲ್ಕು ಜನರಲ್ ವಾರ್ಡ್‌ಗಳಿವೆ. ಒಂದು ವಾರ್ಡ್‌ನಲ್ಲಿ 30 ಹಾಸಿಗೆ ಒಳಗೊಂಡಿದೆ. ಮೂರು ಕ್ಯಾತ್‌ಲ್ಯಾಬ್, ಮೂರು ಆಪರೇಷನ್ ಥಿಯೇಟರ್, ಐಸಿಯು ಏಳು ಒಳಗೊಂಡಿದೆ.