ಬೆಂಗಳೂರು: ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಸರ್ಕಾರದ ನಡೆಗೆ ಹೈಕೋರ್ಟ್ ಆಕ್ರೋಶ ಹೊರಹಾಕಿದೆ.
ಶ್ರಮಿಕ ವರ್ಗದ ಕಟ್ಟಡ ಕಾರ್ಮಿಕರ ಬಡ ಮಕ್ಕಳ ಶಿಕ್ಷಣ ಹಾಗೂ ಇತರ ಅವಶ್ಯಕತೆಗಳಿಗಾಗಿ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ಮಂಡಳಿ ಪರ ವಕೀಲರು, ”ಹಣದ ಉಪಯೋಗ ನಿಯಮಗಳ ಅನುಸಾರವೇ ಆಗಿದೆ. ಅರ್ಜಿದಾರರು ನ್ಯಾಯಾಲಯದ ಅನುಕಂಪ ಗಿಟ್ಟಿಸಿಕೊಳ್ಳಲು ಸತ್ಯವಲ್ಲದ ಮಾಹಿತಿಗಳನ್ನು ನೀಡುತ್ತಿದ್ದಾರೆ” ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು ಎಂದು ಕೋರಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಈ ಅಭಿಪ್ರಾಯ ವ್ಯಕ್ತಪಡಿಸಿತು.
”ಇದರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದು ಏನಿದೆ? ಕಾಯ್ದೆಗೆ ವಿರುದ್ಧವಾಗಿ, ಸಿಎಜಿ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಮಂಡಳಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಿಸಿಕೊಂಡಿರುವುದ್ಯಾಕೆ? ಮಂಡಳಿಯ ಹಣ ನರೇಗಾ ಯೋಜನೆಗೆ, ಇಂದಿರಾ ಕ್ಯಾಂಟೀನ್‌ಗೆ ವೆಚ್ಚ ಮಾಡಿದ್ಯಾಕೆ? ಅಧಿಕಾರಿಗಳಿಗೆ ಕಾರುಗಳನ್ನು ಈ ಹಣದಲ್ಲಿ ಏಕೆ ಖರೀದಿ ಮಾಡಿದ್ದೀರಿ” ಎಂದು ಪ್ರಶ್ನಿಸಿತು.
”ಅಲ್ಲದೇ ಮಂಡಳಿಯ 6,700 ಕೋಟಿ ರೂ. ಹಣ ಠೇವಣಿ ಇದೆ, ಅದಕ್ಕೆ ವರ್ಷಕ್ಕೆ 400 ಕೋಟಿ ರೂ. ಬಡ್ಡಿ ಬರುತ್ತದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗೆ 630 ಕೋಟಿ ರೂ. ಬೇಕು ಅಂತ ಇತ್ತು. 400 ಕೋಟಿ ರೂ. ಬಡ್ಡಿಯಿಂದಲೇ ಬರುವಾಗ 6,700 ಕೋಟಿ ರೂ. ಮೂಲ ನಿಧಿಯಿಂದ 230 ಕೋಟಿ ರೂ. ಕೊಡಲು ಕಷ್ಟವೇನು?” ಎಂದು ನ್ಯಾಯಪೀಠ ಕೇಳಿತು.
ಇದಕ್ಕೆ ಮಂಡಳಿ ಪರ ವಕೀಲರು, ”ಆಡಳಿತಾತ್ಮಕ ವೆಚ್ಚಕ್ಕಾಗಿ ಶೇ.40ರಷ್ಟನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ, ಎಲ್ಲವೂ ಅದರಲ್ಲೇ ಆಗಿದೆ. ಅದನ್ನು ಸಾಬೀತುಪಡಿಸಲು ಸಿದ್ಧ. ಉಳಿದಂತೆ ನರೇಗಾ ಯೋಜನೆಗೆ ಹಣ ಬಳಸುವಂತೆ ಕೇಂದ್ರ ಸರ್ಕಾರವೇ ಹೇಳಿದೆ. ಕೊರೊನಾ ಕಾಲದಲ್ಲಿ ಕಾರ್ಮಿಕರಿಗೆ ಊಟ ನೀಡಲು ಇಂದಿರಾ ಕ್ಯಾಂಟೀನ್‌ಗಳಿಗೆ ಮಂಡಳಿಯ ಹಣ ಕೊಡಲಾಗಿತ್ತು. ಸರ್ಕಾರ 75 ಕೋಟಿ ರೂ. ಕೇಳಿತ್ತು. ಆದರೆ, 8 ಕೋಟಿ ಮಾತ್ರ ಕೊಡಲಾಗಿತ್ತು” ಎಂದು ವಿವರಣೆ ನೀಡಿದರು.
”ನರೇಗಾ ಯೋಜನೆಗೆ ಮಂಡಳಿಯ ಹಣ ಬಳಕೆಗೆ ಸಿಎಜಿ ಆಕ್ಷೇಪ ವ್ಯಕ್ತಪಡಿಸಿತ್ತು. ಅಧಿಸೂಚನೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ” ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
”ಕೇಂದ್ರ ಸರ್ಕಾರ ಬೇಡ ಎಂದಾದ ಮೇಲೂ ಇಲ್ಲಿತನಕ ನೀವು ನಿಧಿಯ ಹಣವನ್ನು ನರೇಗಾ ಯೋಜನೆಗೆ ಕೊಡುವುದನ್ನು ನಿಲ್ಲಿಸಿಲ್ಲವೇಕೆ?” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
”ಎಂಬಿಎ, ಎಂಬಿಬಿಎಸ್ ವ್ಯಾಸಂಗ ಮಾಡಲು ಲ್ಯಾಪ್‌ಟಾಪ್ ಖರೀದಿಗೆ ತಲಾ 30 ಸಾವಿರ ರೂ. ಧನ ಸಹಾಯ ನೀಡುವಂತೆ ಇಬ್ಬರು ವಿದ್ಯಾರ್ಥಿಗಳು ಕೋರ್ಟ್‌ಗೆ ಬಂದಿದ್ದರು. 60 ಸಾವಿರ ರೂ. ಹಣ ಕೊಡಲು ಆಗಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಎಲ್ಲಾ ವಿವರಗಳನ್ನು ನ್ಯಾಯಾಲಯ ಕೇಳಬೇಕಾಯಿತು. 6,700 ಕೋಟಿ ರೂ. ಹಣ ಇದೆ. ದಿನದಲ್ಲಿ ಚಹಾ ಇನ್ನಿತರ ಖರ್ಚುಗಳಿಗೆ 30 ಸಾವಿರ ರೂ. ವೆಚ್ಚ ಆಗಬಹುದು. ಆದರೆ, ಇಬ್ಬರು ಮಕ್ಕಳಿಗೆ 60 ಸಾವಿರ ರೂ. ಕೊಡಲು ಹಣ ಇಲ್ಲ ಎಂದರೆ ಹೇಗೆ?” ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು.
ಅಂತಿಮವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯನ್ನು ಯಾವ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತದೆ, ಫಲಾನುಭವಿಗಳೆಷ್ಟು, ಇಲ್ಲಿವರೆಗೆ ಎಷ್ಟು ಖರ್ಚು ಮಾಡಲಾಗಿದೆ, ನರೇಗಾ, ಇಂದಿರಾ ಕ್ಯಾಂಟಿನ್‌ಗೆ ಹಣ ಕೊಟ್ಟಿದ್ದ್ಯಾಕೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಅಕ್ಟೋಬರ್ ೧ಕ್ಕೆ ಮುಂದೂಡಿತು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now