ಮಂಗಳೂರು: ಮಂಗಳೂರಿನ ಹೃದಯ ಭಾಗದಲ್ಲಿರುವ ಮಂಗಳಾ ಸ್ಟೇಡಿಯಂ ಬಳಿಯಿದ್ದ ನಾಲ್ಕು ಎಕರೆ ಜಾಗವನ್ನು ಚಿಟ್ಟೆಗಳ ಉದ್ಯಾನವನವಾಗಿ ಮಾರ್ಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಫಿಟ್ನೆಸ್’ಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕೆಲವರು ಜಿಮ್’ಗೆ ಹೋದರೆ, ಮತ್ತೂ ಕೆಲವರೂ ಉದ್ಯಾನವನಗಳಲ್ಲಿ ವಾಕಿಂಗ್ ಹೋಗುತ್ತಾರೆ. ಹೀಗೆಯೇ 7 ವರ್ಷಗಳ ಹಿಂದೆ ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿ ವಾಕಿಂಗ್ ಮಾಡುತ್ತಿದ್ದ ಗೆಳೆಯರಿಬ್ಬರು ಹಾಳುಕೊಂಪೆಯಂತಿದ್ದ ಜಾಗವನ್ನು ಹಚ್ಚ ಹಸಿರುವ ಚಿಟ್ಟೆಗಳ ಉದ್ಯಾನವನವಾಗಿ ಮಾರ್ಪಡಿಸಿದ್ದಾರೆ.
ಮಂಗಳೂರಿನ ಅಕ್ಬರ್ ಟ್ರಾವೆಲ್ಸ್ ಉದ್ಯೋಗಿ ರವಿರಾಜ್ ಶೆಟ್ಟಿ ಹಾಗೂ ವಿಪ್ರೊ ಸಂಸ್ಥೆಯ ಮಾಜಿ ಉದ್ಯೋಗಿ ಎಂ.ಡಿ.ಶ್ರೀಕುಮಾರ್ ಅವರು ಚಿಟ್ಟೆಗಳ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೀಕುಮಾರ್ ಕೇರಳ ಮೂಲದವರಾಗಿದ್ದು, ಕಳೆದ ಎರಡು ದಶಕಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಮಂಗಳಾ ಸ್ಟೇಡಿಯಂ ಬಳಿಯಿದ್ದ ನಾಲ್ಕು ಎಕರೆ ಜಾಗವನ್ನು ಚಿಟ್ಟೆಗಳ ಉದ್ಯಾನವಾಗಿ ಮಾರ್ಪಡಿಸಿದ್ದಾರೆ.
ರವಿರಾಜ್ ಶೆಟ್ಟಿಯವರು ರಾಷ್ಟ್ರೀಯ ಮಟ್ಟದ ಲಾಂಗ್ ಜಂಪ್ ಅಥ್ಲೀಟ್ ಆಗಿದ್ದು, ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ 50+ ವಿಭಾಗಗಳಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.
ಪ್ರತೀನಿತ್ಯ ಮಂಗಳಾ ಸ್ಟೇಡಿಯಂ ಬಳಿ ವಾಕಿಂಗ್ ಮಾಡುತ್ತಿದ್ದಾಗ ಬಾಸ್ಕೆಲ್ ಬಾಲ್ ಅಂಗಳದಲ್ಲಿ ಕಸದ ರಾಶಿ, ಮದ್ಯದ ಬಾಟಲಿಗಳು ಬಿದ್ದಿರುವುದನ್ನು ನೋಡುತ್ತಿದ್ದರು. ಇದರಿಂದ ಬೇಸರಗೊಂಡು ಇಬ್ಬರೂ ಸ್ನೇಹಿತರು ಪ್ರತೀನಿತ್ಯ ವಾಕಿಂಗ್ ಗೆ ಬಂದಾಗಲೂ ಈ ಸ್ಥಳವನ್ನು ಸ್ಥಚ್ಛಗೊಳಿಸುತ್ತಿದ್ದರು.
ಕಸದ ರಾಶಿ ತೆರವಿಗೆ ಸುಮಾರು ಒಂದೂವರೆ ತಿಂಗಳುಗಳ ಕಾಲ ಸಮಯ ಬೇಕಾಯಿತು. ಬಳಿಕ ನಿತ್ಯ ಸಸಿಗಳನ್ನು ನೆಡಲು ಆರಂಭಿಸಿದೆವು. ಗಿಡಗಳು ಹೂವು ಬಿಡಲು ಆರಂಭಿಸಿದಾಗ ಸ್ಥಳಕ್ಕೆ ಚಿಟ್ಟೆಗಳು ಬರಲು ಆರಂಭಿಸಿದವು. ಒಂದು ಕಾಲದಲ್ಲಿ ಕಸ ಸುರಿಯುತ್ತಿದ್ದ ಜಾಗ ಇದೀಗ ಚಿಟ್ಟೆಗಳ ಉದ್ಯಾನವಾಗಿ ಮಾರ್ಪಟ್ಟಿದೆ. ಇಲ್ಲಿನ ಗಿಡಗಳನ್ನು ಸ್ಥಳೀಯ ನರ್ಸರಿ ಹಾಗೂ ಅರಣ್ಯ ಇಲಾಖೆಯಿಂದ ಖರೀದಿಸಲಾಗಿತ್ತು ಎಂದು ರವಿರಾಜ್ ಅವರು ಹೇಳಿದ್ದಾರೆ.
ಸಸಿಗಳ ಪೋಷಣೆಗೆ ಆರಂಭದಲ್ಲಿ ಮಂಗಳಾ ಸ್ಟೇಡಿಯಂ ನಮಗೆ ನೀರು ಪೂರೈಸುತ್ತಿತ್ತು, ಬಳಿಕ ನೀರು ಸಿಗದ ಕಾರಣ ಹಲವು ಗಿಡಗಳು ನಾಶವಾದವು. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಪಂಪ್‌ಹೌಸ್ ನೀರನ್ನು ಒದಗಿಸುತ್ತದೆ. ಗೊಬ್ಬರಕ್ಕಾಗಿ ಸಸ್ಯಗಳ ಒಣ ಎಲೆಗಳನ್ನೇ ಬಳಸಲಾಗುತ್ತಿದೆ.
ಇಂದು ಮಂಗಳಾ ಕ್ರೀಡಾಂಗಣದ ಪಕ್ಕದ ಜಾಗದಲ್ಲಿ ಸುಮಾರು 20 ಸಾವಿರ ಗಿಡಗಳಿವೆ. ದಾಸವಾಳ, ಮಲ್ಲಿಗೆ, ಕೇಪುಳ, ಸೀಬೆ ಹಣ್ಣು, ಪಪ್ಪಾಯಿ, ಪೇರಲ, ಮಾವು, ನಿಂಬೆ ಮತ್ತು ಹಲಸಿನ ಸಸಿಗಳನ್ನು ನೆಡಲಾಗಿತ್ತು, ಇದರ ಜೊತೆಗೆ ವಿವಿಧ ಹಣ್ಣುಗಳುಳ್ಳ ಸಸಿಗಳನ್ನು ನೆಟ್ಟಿದ್ದು, ಇವು ಪಕ್ಷಿಗಳಿಗೆ ಪ್ರಿಯವಾದ ಸಸಿಗಳಾಗಿವೆ ಎಂದು ಶ್ರೀಕುಮಾರ್ ಅವರು ಹೇಳಿದ್ದಾರೆ.
ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಬ್ರಿಯ ಶಿವಪುರದವರಾಗಿದ್ದು, ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರವಿರಾಜ್ ಅವರು ಸಸ್ಯಾಹಾರಿಯಾಗಿರುವುದರಿಂದ, ವಾರಾಂತ್ಯದಲ್ಲಿ ಮನೆಗೆ ಹೋದಾಗ ತಮ್ಮ ಖಾಲಿ ಜಮೀನಿನಲ್ಲಿ ನೆಡಲು ಹೂವು ಮತ್ತು ಹಣ್ಣಿನ ಗಿಡಗಳನ್ನು ಒಯ್ಯುತ್ತಿದ್ದರು.
ಈ ಸಸ್ಯಗಳನ್ನು ನಿರ್ವಹಿಸುವುದು ಸುಲಭವಲ್ಲ. ಲಭ್ಯವಿರುವ ನೀರಿನಿಂದ ಸಸ್ಯಗಳ ಪೋಷಣೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಅನುಸರಿಸಿಕೊಂಡು ಸಸ್ಯಗಳ ನಿರ್ವಹಣೆ ಮಾಡಲಾಗುತ್ತಿದೆ. ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿ ಸಸ್ಯಗಳಿಗೆ ನೀರುಣಿಸುತ್ತಿದ್ದೇವೆ. ನಗರ ಜೀವವೈವಿಧ್ಯವನ್ನು ಸಂರಕ್ಷಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ನಮ್ಮ ಬೆಳಗಿನ ಸಮಯವನ್ನು ಇಲ್ಲಿ ಕಳೆಯುತ್ತಿದ್ದೇವೆ. ವಿಶ್ರಾಂತಿ ಪಡೆಯಲು ಇದು ಆಹ್ಲಾದಕರ ಸ್ಥಳವಾಗಿದೆ ಎಂದು ರವಿರಾಜ್ ಹೇಳಿದ್ದಾರೆ.
ಕ್ರೀಡಾ ತರಬೇತುದಾರ ಸುದರ್ಶನ್ ಅವರು, ರವಿರಾಜ್ ಮತ್ತು ಶ್ರೀಕುಮಾರ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಬ್ಬರು ಕಳೆದ 7 ವರ್ಷಗಳಲ್ಲಿ ಖಾಲಿ ಭೂಮಿಯನ್ನು ಹಚ್ಚ ಹಸಿರಿನ ತಾಣವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ತ್ಯಾಜ್ಯವನ್ನು ತೆರವುಗೊಳಿಸುವ ಮತ್ತು ಸಸಿಗಳನ್ನು ನೆಡುವ ಅವರ ಪ್ರಯತ್ನವು ಕ್ರೀಡಾಂಗಣದಲ್ಲಿ ವ್ಯಾಯಾಮ ಮಾಡುವ ವಾಕರ್‌ಗಳು ಮತ್ತು ಕ್ರೀಡಾಪಟುಗಳಿಗೆ ಉತ್ತಮ ವಾತಾವರಣವನ್ನು ಒದಗಿಸಿದೆ ಎಂದು ತಿಳಿಸಿದ್ದಾರೆ.