Bangalore News:
“ಕೆಲವು ಬಾರಿ ಸರ್ಕಾರಕ್ಕೆ ಮುಜುಗರ ಆಗುತ್ತದೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.”ಪೊಲೀಸರಿಗೆ ಅವರದ್ದೇ ಆದ ನಿಯಮವಿದೆ. ಎಲ್ಲದಕ್ಕೂ ನಮ್ಮನ್ನು ಕೇಳಬೇಕಿಲ್ಲ. ಉನ್ನತ ಅಧಿಕಾರಿಗಳು ಇರುತ್ತಾರೆ. ಅವರೇ ತೀರ್ಮಾನಿಸುತ್ತಾರೆ. ಅಂತಿಮವಾಗಿ ಸರ್ಕಾರಕ್ಕೆ ವರದಿ ಕೊಡ್ತಾರೆ. ಕೆಲವು ಬಾರಿ ಸರ್ಕಾರಕ್ಕೆ ಮುಜುಗರ ಆಗುತ್ತದೆ. ಕೆಲವೊಮ್ಮೆ ನಾವೇ ಸರಿ ಅಂತ ಹೇಳುತ್ತೇವೆ” ಎಂದರು.ಸದಾಶಿವನಗರ ನಿವಾಸದ ಸಮೀಪ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯ ಕುರಿತು ಪ್ರತಿಕ್ರಿಯಿಸುತ್ತಾರೆ.
ಪರಿಷತ್ನಲ್ಲಿ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ವಿಚಾರದ ಕುರಿತು ಮಾತನಾಡುತ್ತಾ, “ಪರಿಶೀಲನೆ ಮಾಡಬಹುದು. ಮಾಧ್ಯಮದಲ್ಲಿ ಬಂದಿರುವ ಆಧಾರದ ಮೇಲೆ ಪರಿಶೀಲನೆ ನಡೆಯುತ್ತಿದೆ. ಸಭಾಪತಿಯವರು ಪರಿಶೀಲನೆ ಮಾಡಿ ಎಂದು ನಮಗೆ ಹೇಳಿದ್ರೆ FSLಗೆ ಕಳಿಸಿ ಪರಿಶೀಲನೆ ಮಾಡ್ತೇವೆ. ನಿಯಮಗಳ ಮೇಲೆಯೇ ಪೊಲೀಸರು ಕೆಲಸ ಮಾಡ್ತಾರೆ. ಇದು ಒಳಗಡೆ ನಡೆದಿರುವ ಘಟನೆ, ಹೊರಗೆ ನಡೆದಿಲ್ಲ. ಮಾಧ್ಯಮಗಳು ರೆಕಾರ್ಡ್ ಮಾಡಿದ್ದಕ್ಕೆ ಹೊರಗಡೆ ಬಂದಿದೆ” ಎಂದು ಹೇಳಿದರು.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಜೈಲಾಧಿಕಾರಿ ಹಣ ಸ್ವೀಕರಿಸಿರುವ ಆರೋಪದ ಕುರಿತು ಮಾತನಾಡಿ, “ನಾನು ಆಂತರಿಕವಾಗಿ ತನಿಖೆಗೆ ಆದೇಶಿಸಿದ್ದೇನೆ. 2022ರಲ್ಲಾದ ವಿಡಿಯೋ ತೆಗೆದು ಮೊನ್ನೆ ಹಾಕಿದ್ದಾರೆ. ಯಾರೋ ಇದನ್ನು ಬೇಕಂತಲೇ ಮಾಡುತ್ತಿದ್ದಾರೆ. ಇದನ್ನು ಅಧಿಕಾರಿಗಳೋ, ಹೊರಗಿನವರೋ ಮಾಡುತ್ತಿದ್ದಾರೆ. ಇಲಾಖೆಗೆ ಕೆಟ್ಟ ಹೆಸರು ತರಬೇಕು ಅಂತ ಮಾಡ್ತಿದ್ದಾರೆ. ಈಗ ನೀವು ತೋರಿಸಿರುವ ವಿಡಿಯೋ ಪರಿಶೀಲನೆ ಮಾಡುತ್ತಿದ್ದೇವೆ. ಆ ರೀತಿ ಇದ್ದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇನೆ.
ಘಟನೆ ಯಾವುದೋ ಹಳೆಯದು ಎಂದಾಗ ಅದರ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳುವುದು?” ಎಂದರು. ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕೆಗೆ, “ಗೃಹ ಸಚಿವರು ಇದ್ದಾರಾ? ಇಲ್ವಾ? ಅಂತ ಅವರೇ ತಿಳಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆಯಾ, ಇಲ್ಲವಾ ಎಂಬುದು ಅವರಿಗೆ ಗೊತ್ತಿದೆ. ಯಾವ ರೀತಿಯಾಗಿ ಗೃಹ ಸಚಿವರಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ” ಎಂದು ಪ್ರಶ್ನಿಸಿದರು.