ಬೆಂಗಳೂರು: ಎದೆ ಹಾಲಿನ ವಾಣಿಜ್ಯೀಕರಣವನ್ನು ತಡೆಯುವಂತೆ ಕೋರಿ ಮುನೇಗೌಡ ಎಂಬುವರು ಕರ್ನಾಟಕ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಈ ವೇಳೆ ಎದೆ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಅದನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೈಕೋರ್ಟ್ಗೆ ತಿಳಿಸಿದೆ.
ಎದೆ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಅದನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರಕಾರವು ಕರ್ನಾಟಕ ಹೈಕೋರ್ಟ್ಗೆ ಬುಧವಾರ ತಿಳಿಸಿದೆ.ಎದೆ ಹಾಲಿನ ವಾಣಿಜ್ಯೀಕರಣವನ್ನು ತಡೆಯುವಂತೆ ಕೋರಿ ಮುನೇಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ”ಕೇಂದ್ರ ಆಯುಷ್ ಸಚಿವಾಲಯ ಇತ್ತೀಚೆಗೆ ಕರ್ನಾಟಕ ಸರಕಾರಕ್ಕೆ ಖಾಸಗಿ ಕಂಪನಿಗಳಿಗೆ ಎದೆ ಹಾಲು ಸಂಗ್ರಹಕ್ಕೆ ಅನುಮತಿಸಿ ನೀಡಿರುವ ಪರವಾನಗಿಗಳನ್ನು ರದ್ದುಗೊಳಿಸಬೇಕೆಂದು ನಿರ್ದೇಶನ ನೀಡಿದೆ,” ಎಂದು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಿ ವಿಶ್ವೇಶ್ವರಯ್ಯ, ”ಎದೆ ಹಾಲಿನ 50 ಎಂಎಲ್ ಬಾಟಲ್ ಹಾಗೂ 10 ಗ್ರಾಂ. ಎದೆಹಾಲಿನ ಪೌಡರ್ ಪ್ಯಾಕೆಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅವುಗಳ ಬೆಲೆ ಅತಿ ದುಬಾರಿಯಾಗಿದೆ. ಕ್ರಮವಾಗಿ 1,239 ರೂ. ಹಾಗೂ 313 ರೂ. ನಿಗದಿ ಮಾಡಲಾಗಿದೆ. ಆ ಮೂಲಕ ಎದೆ ಹಾಲನ್ನು ವಾಣಿಜ್ಯೀಕರಣ ಮಾಡಿ ಖಾಸಗಿ ಕಂಪನಿಗಳು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತಿವೆ,” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಕೇಂದ್ರ ಸರಕಾರದ ವಾದದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಆಯುಷ್ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಅರ್ಜಿಯಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ, ಆಯುಷ್ ಸಚಿವಾಲಯಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತು.