ಬೆಂಗಳೂರು: ಪ್ಯಾಲೇಸ್ ಗ್ರೌಂಡ್ನಲ್ಲಿ ಇಂದಿನಿಂದ ಕೇಕ್ ಉತ್ಸವ ಆರಂಭವಾಗಲಿದೆ. ಶೋನಲ್ಲಿ ಡೈನೋಸಾರ್ ವರ್ಲ್ಡ್ ಕೇಕ್ನಿಂದ ಹಿಡಿದು, ರಾಮ ಮಂದಿರ ಕೇಕ್ ಕೂಡ ಮೂಡಿ ಬಂದಿದೆ. ಕ್ರಿಸ್‌ಮಸ್, ಹೊಸ ವರ್ಷವೆಂದರೆ ಬೆಂಗಳೂರಿಗರ ಮನಸ್ಸಿನಲ್ಲಿ ಮೂಡುವ ಚಿತ್ರ ವಾರ್ಷಿಕ ಕೇಕ್ ಉತ್ಸವದ್ದಾಗಿದೆ.
ನಗರದಲ್ಲಿ ಕೇಕ್ ಉತ್ಸವ ಎಂದ ಕೂಡಲೇ ನಮ್ಮ ನೆನಪಿಗೆ ಬರುವುದು ಉತ್ಸವದ ಜನಕ ಸಿ. ರಾಮಚಂದ್ರ ಅವರ ದೂರದೃಷ್ಟಿ, ಸೃಜನಶೀಲತೆಯ ಪ್ರತಿಬಿಂಬವಾದ ಕೇಕ್ ಶೋ. ಈಗ ಈ ಶೋ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.
ಈ ಹಬ್ಬಕ್ಕಾಗಿ ತಿಂಗಳಷ್ಟು ಕಾಲ ತಯಾರಿ ನಡೆದಿದೆ. ಈ ತಯಾರಿಯ ಫಲಿತಾಂಶ ಅಸಾಧಾರಣ ಕೇಕ್‌ಗಳ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ನೋಡುಗರು ಇಲ್ಲಿ ಕಲೆಯ ಮಾಧ್ಯಮವಾಗಿ ಸಕ್ಕರೆ ಮತ್ತು ಮಿಶ್ರಣಗಳ ಅಪರಿಮಿತ ಸಾಧ್ಯತೆಗಳನ್ನು ವೀಕ್ಷಿಸಲಿದ್ದಾರೆ.
ವೈವಿಧ್ಯಮಯ ವಿನ್ಯಾಸಗಳು ಮತ್ತು ಸಂಸ್ಕೃತಿಗಳ ಕಲಾತ್ಮಕ ಅಭಿವ್ಯಕ್ತಿಯನ್ನು ಆಚರಿಸುವ ಥೀಮ್ ಈ ಬಾರಿಯದ್ದಾಗಿದೆ. ಈ ಪ್ರದರ್ಶನದಲ್ಲಿ 20 ಕೇಕ್ ಕಲಾಕೃತಿಗಳಿವೆ. ಪ್ರತಿಯೊಂದೂ ಕೂಡಾ ಅನನ್ಯವಾಗಿದ್ದು, ನೋಡುಗರನ್ನು ಕಲಾ ಲೋಕಕ್ಕೆ ಕೊಂಡೊಯ್ಯಲಿದೆ.
ಸೃಜನಶೀಲತೆ ಮತ್ತು ಕರಕುಶಲತೆಯ ವಿಸ್ಮಯಕಾರಿ ಪ್ರತಿರೂಪವಾಗಿ ಬೆಳೆದಿರುವ ಕೇಕ್ ಉತ್ಸವ ಈಗ ಮತ್ತೆ ನಗರದಲ್ಲಿನ ಕೇಕ್ ಪ್ರಿಯರನ್ನು ಪ್ಯಾಲೇಸ್ ಗ್ರೌಂಡ್ನ ಕಡೆ ಇಂದಿನಿಂದ ಕೈ ಬೀಸಿ ಕರೆಯಲಿದೆ. ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ಸ್ ಹಾಗೂ ಮೈ ಬೇಕ್ ಮಾರ್ಟ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಈ ಉತ್ಸವ ಅನುಭವಿ ಕೇಕ್ ತರಬೇತುದಾರರು, ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿರುವ ವಿದ್ಯಾರ್ಥಿಗಳು ಮತ್ತು ನುರಿತ ಕಲಾವಿದರ ಅಸಾಧಾರಣ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆಯಾಗಿದೆ.
ಸಕ್ಕರೆಯಿಂದ ನಿರ್ಮಿಸಲಾದ ಗಾಜಿನ ಮನೆಯ ಉದ್ಯಾನ ಬೆಂಗಳೂರಿನ ಸಂಸ್ಥಾಪಕರನ್ನು ಕೊಂಡಾಡುವ ಕೆಂಪೇಗೌಡ ಪರಂಪರೆ ಸೇರಿದಂತೆ ಎಲ್ಲಾ ಕೇಕ್ಗಳು ಶಂತನು, ಮಹೇಶ್, ಪೂರ್ವ ಮತ್ತು ನಮ್ರತಾ ಸೇರಿದಂತೆ ಪ್ರಸಿದ್ಧ ಪ್ರತಿಭಾವಂತ ಕಲಾವಿದರ ತಂಡಗಳ ಪ್ರತಿಭೆ, ಕರಕುಶಲತೆ ಪ್ರತಿಬಿಂಬಿಸುತ್ತಿದೆ.
ಖಾದ್ಯ ಆಭರಣ, ಮಿಠಾಯಿ ಮತ್ತು ಆಟಿಕೆ ರೈಲು ಮತ್ತು ಅಲಂಕರಿಸಲ್ಪಟ್ಟ ಸುಮಾರು 20 ಅಡಿ ಎತ್ತರದ ಅದ್ಭುತ ಕಲಾ ಕೃತಿ ಇದಾಗಿದೆ. ಈ 2.8 ಟನ್ ತೂಕದ ಕೇಕ್ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲಿದೆ.
ರಟಾಟೂಲ್ ಖ್ಯಾತ ಸಿನಿಮಾ ಪಾತ್ರ ಇಲ್ಲಿ ಕೇಕ್ನಲ್ಲಿ ಮೂಡಿ ಬಂದಿದೆ.
ಅನಿಮೇಟೆಡ್ ಇಲಿ ಬಾಣಸಿಗನ ತಮಾಷೆಯ ಚಿತ್ರಣ ಸಕ್ಕರೆ ರೂಪದಲ್ಲಿ ಮೂಡಿ ಬಂದಿದೆ. ಕೇಕ್ ರೂಪದಲ್ಲಿ ಇಲ್ಲಿ ಡೈನೋಸಾರ್ ಜಗತ್ತನ್ನು ಬಿಂಬಿಸಲಾಗಿದೆ. ಸಿಹಿ ಮೂಲಕ ರೂಪುಗೊಂಡ ಡೈನೋಸಾರ್‌ಗಳು, ಜ್ವಾಲಾಮುಖಿಯ ದೃಶ್ಯಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದ ಸಾಹಸಮಯ ಭೂಪ್ರದೇಶ ಕೇಕ್ನಲ್ಲಿ ಕಲಾವಿದನ ಕೈಚಳಕದಲ್ಲಿ ಅರಳಿದೆ.
ಭಕ್ತಿಯ ಸಮರ್ಪಣೆ. ಖಾದ್ಯಯುತ, ಸಕ್ಕರೆ ಪಾಕದಿಂದ ರೂಪಿಸಲಾದ ಸಿಂಹಗಳು, ಆನೆಗಳು ಮತ್ತು ಹನುಮಾನ್ನನ್ನು ಒಳಗೊಂಡ ಸಂಕೀರ್ಣವಾದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಫಲಿಸುವ 850 ಕಿಲೋ ಕೇಕ್ ಇದಾಗಿದೆ.
“ಐದು ದಶಕಗಳ ಪಾಕಶಾಲೆಯ ಕಲಾತ್ಮಕತೆ ಮತ್ತು ಸೃಜನಶೀಲತೆಯನ್ನು ಸ್ಮರಿಸಲು ಕೇಕ್ ಶೋ ಆಯೋಜಿಸಲಾಗಿದೆ. ಜನರು ಇಲ್ಲಿಗೆ ಬಂದು ಕಲಾವಿದರನ್ನು ಗೌರವಿಸಬೇಕಿದೆ. ಈ ಕೇಕ್ ಕಲೆಯ ಶ್ರೇಷ್ಠತೆಯ ಸುವರ್ಣ ಮಹೋತ್ಸವವನ್ನು ಸ್ಮರಣೀಯವಾಗಿ ಆಚರಿಸಬೇಕಿದೆ” ಎಂದು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ಸ್ ಸಂಸ್ಥೆಯ ಪರಂಶುಪಾಲರಾದ ಮನೀಶ್ ಗೌರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.