ಶ್ರೀನಗರ: ಶೇರ್ ಇ ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ 11:30ಕ್ಕೆ ನಡೆದ ಸಮಾರಂಭದಲ್ಲಿ ಒಮರ್ ಅಬ್ದುಲ್ಲಾ ಎರಡನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಪುಟ ಸಚಿವರಾಗಿ ಸುರೇಂದ್ರ ಚೌಧರಿ, ಸಕೀನಾ, ಜಾವೇದ್ ಅಹ್ಮದ್ ರಾಣಾ, ಜಾವೇದ್ ದಾರ್, ಸತೀಶ್ ಶರ್ಮಾ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಒಮರ್ ಅಬ್ದುಲ್ಲಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಗುಲಾಮ್ ಅಹ್ಮದ್ ಮಿರ್ ಅವರನ್ನು ಕಾಂಗ್ರೆಸ್ ಮಂಗಳವಾರ ನೇಮಕ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಮೊದಲ ಬಾರಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜಯ ಗಳಿಸಿತ್ತು.
42 ಮಂದಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು, ನಾಲ್ವರು ಪಕ್ಷೇತರರು, ಕಾಂಗ್ರೆಸ್ ಪಕ್ಷದ ಆರು ಮಂದಿ ಹಾಗೂ ಸಿಪಿಐ(ಎಂ)ನ ಒಬ್ಬ ಶಾಸಕರ ಬೆಂಬಲ ತಮಗಿದೆ ಎಂದು ಅಬ್ದುಲ್ಲಾ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಒಟ್ಟು 90 ಸ್ಥಾನಗಳಲ್ಲಿ ಎನ್‌ಸಿ 42 ಸ್ಥಾನಗಳನ್ನು ಗೆದಿದ್ದರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.
ಚುನಾವಣಾ ಪೂರ್ವ ಮೈತ್ರಿಕೂಟದಿಂದ 49 ಶಾಸಕರಿದ್ದು, ಐವರು ಸ್ವತಂತ್ರ ಶಾಸಕರು ಕೂಡ ಒಮರ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ, ಆಮ್ ಆದ್ಮಿ ಪಕ್ಷವು ಕೂಡ ಬೆಂಬಲ ನೀಡಿದೆ. ಮೆಹಬೂಬಾ ಮುಫ್ತಿ ಅವರ ಪಕ್ಷವಾದ ಪಿಡಿಪಿ ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.