ನವದೆಹಲಿ: ಐಐಟಿ ಗುವಾಹಟಿ ಸಂಶೋಧಕರು ಶುದ್ಧ ಇಂಧನ ತಯಾರಿಸುವ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ.
ಮಿಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಶುದ್ಧ ಜೈವಿಕ ಇಂಧನಗಳಾಗಿ ಪರಿವರ್ತಿಸುವ ತಂತ್ರಜ್ಞಾನವೊಂದನ್ನು ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಮೆಥನೊಟ್ರೋಫಿಕ್ ಬ್ಯಾಕ್ಟೀರಿಯಾವನ್ನು ಬಳಸಿಕೊಂಡು ಮಿಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಶುದ್ಧ ಜೈವಿಕ ಇಂಧನಗಳಾಗಿ ಪರಿವರ್ತಿಸುವ ಸುಧಾರಿತ ಜೈವಿಕ ವಿಧಾನ ಇದಾಗಿದೆ.
ಈ ಶಂಶೋಧನೆ ಸುಸ್ಥಿರ ಇಂಧನ ಪರಿಹಾರಗಳು ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆಯತ್ತ ಮಹತ್ವದ ಮೈಲಿಗಲ್ಲಾಗಿದೆ ಎಂದು ಗುವಾಹಟಿ ಐಐಟಿ ತಿಳಿಸಿದೆ.
ಹಸಿರುಮನೆ ಅನಿಲ ಮಿಥೇನ್ ಇಂಗಾಲದ ಡೈಆಕ್ಸೈಡ್ಗಿಂತ 27 ರಿಂದ 30 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಇದು ಜಾಗತಿಕ ತಾಪಮಾನ ಏರಿಕೆಗೆ ಬಹುದೊಡ್ಡ ಕಾರಣವಾಗಿದೆ ಎಂದು ಐಐಟಿ ಗುವಾಹಟಿಯ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ದೇಬಶಿಶ್ ದಾಸ್ ವಿವರಿಸಿದರು.
ಎಲ್ಸೆವಿಯರ್ನ (Elsevier) ಪ್ರಮುಖ ನಿಯತಕಾಲಿಕವಾದ ಫ್ಯೂಯಲ್ (Fuel)ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ಹಸಿರುಮನೆ ಅನಿಲಗಳ ಹಾನಿಕಾರಕ ಪರಿಸರ ಪರಿಣಾಮ ಮತ್ತು ಪಳೆಯುಳಿಕೆ ಇಂಧನ ನಿಕ್ಷೇಪಗಳ ಸವಕಳಿ ಈ ಎರಡು ಪ್ರಮುಖ ಜಾಗತಿಕ ಸವಾಲುಗಳಿಗೆ ಪರಿಹಾರ ನೀಡುತ್ತದೆ.
“ಸೌಮ್ಯ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ಮಿಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಬಯೋ-ಮೆಥನಾಲ್ ಆಗಿ ಪರಿವರ್ತಿಸಲು ಒಂದು ರೀತಿಯ ಮೆಥನೊಟ್ರೋಫಿಕ್ ಬ್ಯಾಕ್ಟೀರಿಯಾವನ್ನು ಬಳಸುವ ಸಂಪೂರ್ಣ ಜೈವಿಕ ಪ್ರಕ್ರಿಯೆಯನ್ನು ತಮ್ಮ ತಂಡವು ಅಭಿವೃದ್ಧಿಪಡಿಸಿದೆ ಎಂದು ದಾಸ್ ಹೇಳಿದರು. ಮೀಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ತಿನ್ನುವ ಬ್ಯಾಕ್ಟೀರಿಯಾದಿಂದ ಪಡೆದ ಜೈವಿಕ ಮೆಥನಾಲ್ ಪಳೆಯುಳಿಕೆ ಇಂಧನಗಳಿಗೆ ಕಾರ್ಯಸಾಧ್ಯವಾದ ಪರ್ಯಾಯವಾಗಿರುವುದರಿಂದ ಈ ಸಂಶೋಧನೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ” ಎಂದು ಅವರು ತಿಳಿಸಿದರು.
“ಮಿಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ದ್ರವ ಇಂಧನಗಳಾಗಿ ಪರಿವರ್ತಿಸುವುದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಮತ್ತು ನವೀಕರಿಸಬಹುದಾದ ಇಂಧನವನ್ನು ತಯಾರಿಸಬಹುದು. ಪ್ರಸ್ತುತ ಬಳಸಲಾಗುತ್ತಿರುವ ಮೀಥೇನ್ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಶುದ್ಧ ಜೈವಿಕ ಇಂಧನಗಳಾಗಿ ಪರಿವರ್ತಿಸುವ ರಾಸಾಯನಿಕ ವಿಧಾನಗಳು ಅಧಿಕ ಶಕ್ತಿ ವ್ಯಯವಾಗುವ ಮತ್ತು ದುಬಾರಿಯಾಗಿವೆ. ಅಲ್ಲದೆ ಈ ವಿಧಾನದಲ್ಲಿ ವಿಷಕಾರಿ ಉಪ ಉತ್ಪನ್ನಗಳನ್ನು ಉತ್ಪಾದನೆಯಾಗುತ್ತವೆ” ಎಂದು ಅವರು ಹೇಳಿದರು.