ಮಹಾರಾಷ್ಟ್ರ : ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರುವ ಮಾಡಬೇಕು. ಲೌಡ್ ಸ್ಪೀಕರ್ ಬಳಕೆಗೆ ಯಾವುದೇ ಮಸೀದಿಗೆ ಅವಕಾಶ ಕೊಡಬಾರದು ಎಂದು ಎಂಎನ್‌ಎಸ್ ಪಕ್ಷದ ವರಿಷ್ಠ ರಾಜ್ ಠಾಕ್ರೆ ಹೇಳಿದ್ದಾರೆ.
ಜನರಿಗೆ ತೊಂದರೆ ಕೊಡುವಂತಹ ಲೌಡ್ ಸ್ಪೀಕರ್‌ಗಲ ಬಳಕೆಗೆ ಅವಕಾಶ ನೀಡಬಾರದು.
ಒಂದು ವೇಳೆ ಯಾವುದಾದರೂ ಹಿಂದೂ ದೇವಸ್ಥಾನ ಇದೇ ರೀತಿ 365 ದಿನವೂ ಲೌಡ್ ಸ್ಪೀಕರ್ ಬಳಸುತ್ತಿದ್ದರೆ ಅದನ್ನೂ ಸಹ ತೆಗೆಸಬೇಕು.
ಜನರು ದೇಗುಲಕ್ಕೆ ಹೋಗುತ್ತಾರೆ. ಒಂದು ನಿಮಿಷ ಭಕ್ತಿಯಿಂದ ಪ್ರಾರ್ಥಿಸಿ ದೇವರ ಕಾಲಿಗೆ ಮುಗಿದು ಹೊರಬರುತ್ತಾರೆ. ಅದಕ್ಕೆ ಈ ಗದ್ದಲ್ಲವೆಲ್ಲಾ ಬೇಕಿಲ್ಲ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಬಾಳಾ ಸಾಹೇಬ್ ಠಾಕ್ರೆ ಮಗ (ಉದ್ಧವ್ ಠಾಕ್ರೆ) ಸಿಎಂ ಆಗಿದ್ದಾಗಲೂ ನಾನು ಇದನ್ನೇ ಹೇಳಿದ್ದೆ. ಒಂದು ವೇಳೆ ಲೌಡ್ ಸ್ಪೀಕರ್‌ಗಳನ್ನು ತೆಗೆಸದಿದ್ದರೆ ನಾವು ಮಸೀದಿಗಳ ಎದುರು ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದೆ. ಆದರೆ ನನ್ನ ಪಕ್ಷದ 17 ಸಾವಿರ ಕಾರ್ಯಕರ್ತರ ವಿರುದ್ದ ಕೇಸು ದಾಖಲಿಸಲಾಯಿತು ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
“ಮುಸ್ಲಿಂ ವಸತಿಗಳಲ್ಲಿನ ಮದರಸಾಗಳ ಮೇಲೆ ದಾಳಿ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಕೋರುತ್ತೇನೆ. ಈ ಪ್ರದೇಶಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ವಾಸಿಸುತ್ತಿದ್ದಾರೆ. ಮುಂಬಯಿ ಪೊಲೀಸರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿದೆ. ನಮ್ಮ ಶಾಸಕರು ಅವರನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಳಿ ಆಧಾರ್ ಕಾರ್ಡ್ ಇಲ್ಲ. ಆದರೆ ಅವರಿಗೆ ಅದು ಸಿಗುವಂತೆ ಶಾಸಕರು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧವೂ ಹರಿಹಾಯ್ದಿರುವ ರಾಜ್, 1999ರಲ್ಲಿ ತಮ್ಮ ಪಕ್ಷ ಸ್ಥಾಪನೆ ಮಾಡಿದ ಬಳಿಕ ಮಹಾರಾಷ್ಟ್ರದಲ್ಲಿ ಜಾತಿವಾದಿ ರಾಜಕಾರಣ ಉದ್ಭವವಾಗಲು ಪವಾರ್ ಕಾರಣ ಎಂದು ದೂರಿದ್ದಾರೆ.
“1999ರಲ್ಲಿ ಎನ್‌ಸಿಪಿ ರಚನೆಯಾಯಿತು. ಅಲ್ಲಿಂದಲೇ ರಾಜ್ಯದಲ್ಲಿ ಜಾತಿವಾದ ಜೋರಾಯಿತು. ಅದನ್ನು ಶರದ್ ಪವಾರ್ ಮಾಡಿದ್ದು. ಪವಾರ್ ಅವರ ಎನ್‌ಸಿಪಿ ಯಾವಾಗಲೂ ಜಾತಿ ಆಧಾರದಲ್ಲಿ ರಾಜಕಾರಣ ಮಾಡುತ್ತಾ ಬಂದಿದೆ ಮತ್ತು ಜನರ ನಡುವೆ ವಿಭಜನೆ ಮಾಡಿದೆ. ನಾವು ಜಾತಿ ರಾಜಕೀಯದಿಂದ ಹೊರಗೆ ಬಾರದೆ ಇದ್ದರೆ, ಹಿಂದೂ ಹೇಗೆ ಆಗುತ್ತೇವೆ? ಹಿಂದುತ್ವದ ಯಾವ ಧ್ವಜವನ್ನು ನಾವು ಹೊಂದಿದ್ದೇವೆ?” ಎಂದು ಪ್ರಶ್ನಿಸಿದ್ದಾರೆ.