ಮುಂಬೈ: 10 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ಹತ್ಯೆ ಮಾಡಬೇಕಾಗುತ್ತದೆ ಎಂಬ ಜೀವ ಬೆದರಿಕೆಯ ಸಂದೇಶ ಬಂದಿದೆ.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್ಗೆ ಶನಿವಾರ (ನ.02) ಸಂಜೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಇನ್ನೂ 10 ದಿನಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದ ಮಹಿಳೆಯೊಬ್ಬರನ್ನು ಮುಂಬೈ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಮಹಿಳೆಯನ್ನು ಫಾತಿಮಾ ಖಾನ್ (24) ಎಂದು ಗುರುತಿಸಲಾಗಿದೆ. ಈಕೆ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ನೆರೆಯ ಥಾಣೆ ಜಿಲ್ಲೆಯ ಉಲ್ಹಾಸ್ನಗರ ಪ್ರದೇಶದಲ್ಲಿ ನೆಲೆಸಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಮಾಡಿದ್ದಾಳೆಂದು ತಿಳಿದುಬಂದಿದೆ.
ಅದೇ ರೀತಿ, ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕ್ ಅವರ ಪುತ್ರ, ಬಾಂದ್ರಾ ಪೂರ್ವ ಎನ್ಸಿಪಿ ಶಾಸಕ ಜೀಶನ್ ಸಿದ್ದಿಕ್ಗೆ ಬೆದರಿಕೆ ಹಾಕಿದ್ದಕ್ಕಾಗಿ 20 ವರ್ಷದ ವ್ಯಕ್ತಿಯನ್ನು ನೋಯ್ಡಾದಲ್ಲಿ ಮಂಗಳವಾರ ಬಂಧಿಸಲಾಗಿದೆ. ಆತನನ್ನು ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಾಬಾ ಸಿದ್ದಿಕ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ರೊಂದಿಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ಕೊಂದಿದ್ದಾಗಿ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.
ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕ್ ಅವರನ್ನು ಅವರ ಮಗ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.