ಬೆಂಗಳೂರು ಗ್ರಾಮಾಂತರ: ತೆಂಗಿನಕಾಯಿ ದರ ದಾಖಲೆಯಲ್ಲಿ ಏರಿಕೆಯಾಗಿರುವುದು ತೆಂಗು ಬೆಳೆಗಾರರಿಗೆ ಸಂತಸ ಗ್ರಾಹಕರಿಗೆ ತೆಂಗಿನಕಾಯಿ ಖರೀದಿ ಹೊರೆಯಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೆಂಗಿನಕಾಯಿ ಬೆಲೆ 50 ರಿಂದ 55 ರೂ.ಗೆ ಏರಿದೆ. ಉತ್ತಮ ಗುಣಮಟ್ಟದ ತೆಂಗಿನ ಕಾಯಿಗಳು ಮಾತ್ರ ಒಂದೆರಡು ರೂ. ಪ್ರತಿ ಕೆಜಿಗೆ ಹೆಚ್ಚುವರಿ ಪಡೆಯುತ್ತಿತ್ತು. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ತೆಂಗು ಕೂಡ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ತೆಂಗಿನಕಾಯಿಗಳನ್ನು ಹೆಚ್ಚಾಗಿ ಬಳಸುವ ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ. ಕೆಲವೆಡೆ ಹಾಸನ, ತುಮಕೂರುಗಳಿಂದ ತೆಂಗಿನ ಕಾಯಿ ರವಾಣೆಯಾಗುತ್ತಿದೆ. ಸಾಲು-ಸಾಲು ಹಬ್ಬ, ಸಮಾರಂಭದ ಅಡುಗೆ, ಹೋಟೆಲ್, ಶುಭ ಕಾರ್ಯಗಳಲ್ಲಿ ಫಲ ತಾಂಬೂಲ ನೀಡುವವರಿಗೂ ಆತಂಕ.
ದೇಶದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ಬೆಳೆಯಲಾಗುತ್ತಿದೆ. ರಾಜ್ಯದ ಎಲ್ಲಾ ಕಡೆಗಳಲ್ಲೂ ತೆಂಗಿಗೆ ಬೇಡಿಕೆಯಿದೆ. ಇನ್ನೂ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಇರುವುದರಿಂದ ತೆಂಗು ಮತ್ತಷ್ಟು ದುಬಾರಿಯಾಗುವ ಆತಂಕವಾಗಿದೆ.
ಹೋಟೆಲ್, ಕ್ಯಾಂಟಿನ್‌ಗಳಲ್ಲಿ ಆಹಾರ ತಯಾರಿಕೆಗೆ ಪ್ರತಿದಿನ ಹತ್ತಾರು ತೆಂಗಿನ ಕಾಯಿಗಳನ್ನು ಬಳಸುತ್ತಾರೆ. ಉತ್ತಮ ಗಾತ್ರದ ತೆಂಗಿನಕಾಯಿಗಳು 800 ಗ್ರಾಂ. ನಿಂದ 1 ಕೆಜಿವರೆಗೂ ತೂಗುವುದರಿಂದ ಒಂದು ಕಾಯಿಗೆ 50 ರೂ ನೀಡುವ “ಆಹಾರ ತಯಾರಿಕೆಯಲ್ಲಿ ಪ್ರತಿ ದಿನ 30 ರಿಂದ 40 ತೆಂಗಿನಕಾಯಿಗಳನ್ನು ಬಳಸಲಾಗುತ್ತಿದೆ. ಇದೀಗ ಬಹುತೇಕ ಒಂದು ತೆಂಗಿನ ಕಾಯಿ ಬೆಲೆ 50ರೂ ದಾಟಿದ್ದು, ಸಾಕಷ್ಟು ಸಮಸ್ಯೆಯಾಗುತ್ತಿದೆ” ಎಂದು ಹೋಟೆಲ್ ಉದ್ಯಮಿ ರಮೇಶ್ ತಿಳಿಸಿದ್ದಾರೆ.