ಬೆಂಗಳೂರು: ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ ನಿಧಿಯ ಮೊತ್ತದಲ್ಲಿ ಶೇ.28ರಷ್ಟನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ಹೊರಡಿಸಲಾದ ಆದೇಶ ಸಂಬಂಧ ವಿವರಣೆ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತೋರಣಗಲ್‌ನ ಧರಣಿ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೈ.ಜಿ.ದಿಲೀಪ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾಗಿರುವ 1,700 ಕೋಟಿಯಲ್ಲಿ ಈಗಾಗಲೇ ನೂತನ ವಿಜಯನಗರ ಜಿಲ್ಲೆಗೆ 600 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಈ ನಿಧಿಯ ಮೊತ್ತದಲ್ಲಿ 2022ರ ನಂತರದಿಂದ ಪ್ರತಿ ವರ್ಷ ಶೇ.28ರಷ್ಟನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ-1)ಯ ಅಧೀನ ಕಾರ್ಯದರ್ಶಿ 2022ರ ಮಾಚ್ 14ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಈ ಆದೇಶವು ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ’ (ಪಿಎಂಕೆಕೆಕೆವೈ)ಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಬಾಧಿತ ಪ್ರದೇಶ 2.33 ಲಕ್ಷ ಹೆಕ್ಟೇರ್ ಇದ್ದು, ಅದರ ಅಭಿವೃದ್ಧಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ವಿಜಯನಗರ ಜಿಲ್ಲೆಯಲ್ಲಿ 76 ಸಾವಿರ ಹೆಕ್ಟೇರ್ ಗಣಿ ಬಾಧಿತ ಪ್ರದೇಶವಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ನಿಧಿಯಲ್ಲಿ ಶೇ.28ರಷ್ಟನ್ನು ವಿಜಯನಗರ ಜಿಲ್ಲೆಗೆ ಕೊಟ್ಟರೆ, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಆದೇಶ ರದ್ದುಪಡಿಸಬೇಕು. ನಿಧಿ ವರ್ಗಾವಣೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದಿಸಿ, ನಿಧಿ ವರ್ಗಾವಣೆ ಕುರಿತ ಆದೇಶದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ ಆಗಿಲ್ಲ, ಅದನ್ನು ಸಾಬೀತುಪಡಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ಪರ ವಕೀಲರಾದ ನಿಲೋಫರ್ ಅಕ್ಬರ್, ಆದೇಶಕ್ಕೆ ಯಾವುದೇ ರೀತಿ ಮಧ್ಯಂತರ ತಡೆ ನೀಡಬಾರದು. ಏಕೆಂದರೆ, ಬಳ್ಳಾರಿ ಜಿಲ್ಲಾ ಖನೀಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ವಿಜಯನಗರ ಜಿಲ್ಲೆಗೆ ಹೋಗುವ ಹಣ ಆ ಜಿಲ್ಲೆಯ ಬಡ ಜನರು ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಬಳಕೆಯಾಗುತ್ತದೆ ಎಂದರು.
ವಾದ ಪ್ರತಿ ವಾದ ಆಲಿಸಿದ ಪೀಠ, ಈ ಹಂತದಲ್ಲಿ ನೋಟಿಸ್ ಜಾರಿಗೊಳಿಸುದಾಗಲಿ ಅಥವಾ ಮಧ್ಯಂತರ ಆದೇಶ ನೀಡಲಾಗದು. ನಿಧಿ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಮೊದಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿವರಣೆ ನೀಡಲಿ, ಅದರ ಬಳಿಕ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸೋಣ ಎಂದು ಹೇಳಿ ವಿಚಾರಣೆ ಮುಂದೂಡಿತು.
ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ಸಂಗ್ರಹವಾಗಿರುವ ಸಂಪೂರ್ಣ ನಿಧಿಯಲ್ಲಿ ಶೆ.28ರಷ್ಟನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು. ಅಲ್ಲದೆ, ಸಂಡೂರು ತಾಲೂಕಿನಲ್ಲಿ ಇನ್ನು ಮುಂದೆ ಸಂಗ್ರಹಿಸಬಹುದಾದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಶೇ.28ರಷ್ಟನ್ನು ಪ್ರತಿ ವರ್ಷ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ-1)ಯ ಅಧೀನ ಕಾರ್ಯದರ್ಶಿ 2022ರ ಮಾರ್ಚ್ 14ರಂದು ಆದೇಶ ಹೊರಡಿಸಿದ್ದರು.
ಈ ಆದೇಶದಂತೆ ವಿಜಯನಗರ ಜಿಲ್ಲೆಗೆ ನಿಧಿಯ ಹಣ ಹಂಚಿಕೆ ಮಾಡುವ ಸಂಬಂಧ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಸರ್ಕಾರ 2024ರ ಜುಲೈ 10ರಂದು ಸುತ್ತೋಲೆ ಹೊರಡಿಸಿತ್ತು. ಇವರೆಡನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.