ಹಾವೇರಿ: ಪ್ರತೀವರ್ಷ ಶಿಶುನಾಳ ಷರೀಫ್ ಹಾಗೂ ಗೋವಿಂದ ಭಟ್ ಅವರ ತೆಪ್ಪೋತ್ಸವ ಹಾಗೂ ರಥೋತ್ಸವ ನಡೆಯುತ್ತದೆ. ಇಲ್ಲಿ ನಡೆಯುವ ಜಾತ್ರೆ ಕೋಮು ಸಾಮರಸ್ಯದ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಶಿಷ್ಯ ಶಿಶುನಾಳ ಷರೀಫ್ ಸಮಾಧಿ ಹಾಗೂ ಗುರು ಗೋವಿಂದ ಭಟ್ ಅವರ ದೇವಸ್ಥಾನವಿರುವ ಸ್ಥಳ ಈಗ ಹಿಂದೂ ಮತ್ತು ಮುಸ್ಲಿಂ ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದೆ.
ಎರಡೂ ಕೋಮಿನವರೂ ಇಲ್ಲಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ಶಿಶುನಾಳ ಶರೀಫರ ಜನ್ಮಭೂಮಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮ ಸಂತ ಶಿಶುನಾಳ ಶರೀಫರ ಜನ್ಮಭೂಮಿ. ಕರ್ನಾಟಕದ ಕಬೀರ ಎಂದೇ ಕರೆಯಲ್ಪಡುವ ಶಿಶುನಾಳ ಶರೀಫರು ತತ್ವಜ್ಞಾನಿಯಾಗಿ ಜಾನಪದ ಗಾರುಡಿಗನಾಗಿ ಸಮಾಜಸೇವಕನಾಗಿ ಚಿರಪರಿಚತರಾಗಿದ್ದರೆ.
ಶಿಶುನಾಳ ಶರೀಫರು ಮುಸ್ಲಿಂರಾದರೆ ಅವರ ಗುರುಗಳಾದ ಗೋವಿಂದ ಭಟ್ ಹಿಂದೂ. ಗುರು ಶಿಷ್ಯರು ಮಾದರಿ ಗುರುಶಿಷ್ಯರಾಗಿರದೇ ಇಡೀ ವಿಶ್ವಕ್ಕೆ ಕೋಮು ಸಾಮರಸ್ಯದ ಸಂದೇಶ ಸಾರಿದವರು. ಇವರ ಬದುಕು, ಕೃತಿಗಳು ಸಂದೇಶಗಳಲ್ಲಿ ಕೋಮು ಸಾಮರಸ್ಯ ಅನುರಣಿಸುತ್ತವೆ.
ಶಿಶುನಾಳದ ಸಮೀಪ ಇರುವ ಶರೀಫಗಿರಿಯಲ್ಲಿ ಶಿಶುನಾಳ ಶರೀಫರ ಸಮಾಧಿ ಇದೆ. ಜೊತೆಗೆ ಅವರ ತಂದೆ ತಾಯಿಯ ಸಮಾಧಿಯೂ ಇದೆ. ಇದರ ಕೂಗಳತೆಯ ದೂರದಲ್ಲಿ ಗೋವಿಂದ ಭಟ್ ಅವರ ದೇವಸ್ಥಾನವಿದೆ. ಶಿಶುನಾಳ ಶರೀಫರು ನೆಟ್ಟಿದ್ದ ಬೇವಿನಮರದ ಕೆಳಗೆ ಶರೀಫರ ಸಮಾಧಿ ಇದ್ದು, ಇಲ್ಲಿಯೇ ಗುರು ಗೋವಿಂದ ಭಟ್ ಮತ್ತು ಶರೀಫರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಹಿಂದೂಗಳು ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ ಅವರ ಮೂರ್ತಿಗೆ ಪೂಜೆ ಸಲ್ಲಿಸಿ ಹಣ್ಣುಕಾಯಿ ನೈವೇದ್ಯ ಅರ್ಪಿಸುತ್ತಾರೆ. ನಂತರ ಶರೀಫರ ಸಮಾಧಿಗೆ ತಲೆಬಾಗಿ ನಮಿಸಿ ಗೋವಿಂದ ಭಟ್ ಅವರ ದೇವಸ್ಥಾನಕ್ಕೆ ತೆರಳುತ್ತಾರೆ. ಇಲ್ಲಿಗೆ ಆಗಮಿಸುವ ಮುಸ್ಲಿಮರು ಗುರು ಗೋವಿಂದ ಭಟ್ ಮತ್ತು ಶಿಶುನಾಳ ಶರೀಫರ ಮೂರ್ತಿಗೆ ಸಕ್ಕರೆ ಊದಿಕೆ ಮಾಡುತ್ತಾರೆ. ಹಿಂದೂಗಳ ಪೂಜೆ ಸಲ್ಲಿಸಲು ಜಂಗಮರಿದ್ದರೆ ಮುಸ್ಲಿಮರ ಪರವಾಗಿ ಪೂಜೆ ಸಲ್ಲಿಸಲು ಶರೀಫರ ವಂಶಸ್ಥರು ಇಲ್ಲಿದ್ದಾರೆ. ಇಲ್ಲಿಗೆ ಎರಡು ಕೋಮಿನವರು ಹರಕೆ ಹೊರುತ್ತಾರೆ. ಇಲ್ಲಿಗೆ ಬಂದರೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದಾರೆ.
ಪ್ರತೀವರ್ಷ ಶ್ರಾವಣ ಮಾಸದಲ್ಲಿ ಶಿಶುನಾಳ ಶರೀಫರ ಮತ್ತು ಗೋವಿಂದ ಭಟ್ ಅವರ ತೆಪ್ಪೋತ್ಸವ ಇಲ್ಲಿ ನಡೆಯುತ್ತೆ. ಶಿವರಾತ್ರಿಯ ದಿನಗಳಂದು ಗುರುಶಿಷ್ಯರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ಉತ್ತರ ಭಾರತದ ನಾಗಾಸಾಧುಗಳು ಆಗಮಿಸುವುದ ವಿಶೇಷ. ಗುರುಶಿಷ್ಯರ ಬೆಳ್ಳಿಯ ಮೂರ್ತಿಗಳನ್ನು ರಥದಲ್ಲಿ ಇಟ್ಟು ಎಳೆಯಲಾಗುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಈ ಜಾತ್ರೆ ಕೋಮು ಸಾಮರಸ್ಯದ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.
ಗ್ರಾಮದಲ್ಲಿ ಶಿಶುನಾಳ ಶರೀಫರ ಅರಾಧ್ಯ ದೈವ ಶಿಶುನಾಳಧೀಶ ಅಂದರೆ ಬಸವಣ್ಣನ ದೇವಸ್ಥಾನವಿದೆ. ಶಿಶುನಾಳ ಹಾವೇರಿ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದಲ್ಲಿಯೇ ಕೋಮು ಸಾಮರಸ್ಯ ಸಾರುವ ಶ್ರದ್ಧಾ ಕೇಂದ್ರವಾಗಿದೆ. ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಶಿಶುನಾಳ ಬಂದ ಪ್ರವಾಸಿಗರಿಗೆ ಸೌಹಾರ್ದತೆಯ ಮಹತ್ವ ಸಾರುತ್ತದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now