ಬೆಂಗಳೂರು: ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೂ ಪರಿಹಾರ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದೊಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಮುಂದಿನ ವಾರ ಸಂಬಂಧಪಟ್ಟ ರೈತರಿಗೆ ಪರಿಹಾರ ಪಾವತಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಡೇಟಾ ಎಂಟ್ರಿ ಕೆಲಸಗಳೂ ಮುಕ್ತಾಯದ ಹಂತದಲ್ಲಿದೆ. ರೂ.120 ಕೋಟಿ ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ ಎಂದು ತಿಳಿಸಿದರು.
ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಠ 5,000 ಜನರ ಅರ್ಜಿಗಳನ್ನಾದರೂ “ಬಗರ್ ಹುಕುಂ” ಕಮಿಟಿಯ ಎದುರು ಮಂಡಿಸಿ ಡಿ.15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಮೊದಲು ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳ ನಂತರವೇ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಲು ಸಾಧ್ಯ. ಈ ಕೆಲಸಗಳು ಸಮಯಾವಕಾಶ ಬೇಡುವಂತದ್ದಾಗಿದ್ದು, ಅಧಿಕಾರಿಗಳಿಗೆ ಮೊದಲ ಹಂತದಲ್ಲಿ 5,000 ಅರ್ಜಿಗಳ ಗುರಿ ನೀಡಿದ್ದು, ಜನವರಿ ವೇಳೆಗೆ ಈ ಗುರಿ 15 ರಿಂದ 20 ಸಾವಿರಕ್ಕೆ ಏರಿಕೆಯಾಗಲಿದೆ ಎಂದರು.
ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ ಕಮಿಟಿ ಎದುರು ಇಡಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ. ಡಿ.15ರ ಒಳಗೆ ರಾಜ್ಯಾದ್ಯಂತ ಕನಿಷ್ಠ 5,000 ಅರ್ಹ ಅರ್ಜಿಗಳನ್ನು ಕಮಿಟಿ ಎದುರು ಮಂಡಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ಖಾತೆಯಲ್ಲೇ ರೂ. 642 ಕೋಟಿ ಹಣ ಲಭ್ಯವಿದ್ದು, ಈ ಹಣದಲ್ಲೇ ಪರಿಹಾರ ಶೀಘ್ರ ವಿತರಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಸುಮಾರು 77,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಕೆಲವೆಡೆ ಮನೆ ಕುಸಿದಿದ್ದವು, ಕೆಲವೆಡೆ ಪ್ರಾಣ ಹಾನಿಯಂತಹ ಘಟನೆಗಳೂ ಸಂಭವಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಒಟ್ಟಾರೆ ರೂ.162 ಕೋಟಿ ಹಣವನ್ನು ಪರಿಹಾರವಾಗಿ ರೈತರ ಖಾತೆಗಳಿಗೆ ಈಗಾಗಲೇ ಜಮೆ ಮಾಡಲಾಗಿದೆ ಎಂದರು.
“ಬಗರ್ ಹುಕುಂ” ಯೋಜನೆಯ ಅಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು ಎಂದು ತಿಳಿಸಿದರು.
ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದವರ ಪೈಕಿ 5 ರಿಂದ 6 ಲಕ್ಷ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ. ಕಾನೂನು ರೀತ್ಯಾ ಅರ್ಜಿ ಸಲ್ಲಿಸಬೇಕಾದ ದಿನಕ್ಕೆ 18 ವರ್ಷ ತುಂಬದ 26,051 ಜನ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಈಗಾಗಲೇ 4.38 ಎಕರೆ ಜಮೀನು ಹೊಂದಿರುವ 26,922 ಅರ್ಜಿಗಳು, ಕೆರೆ ರಸ್ತೆ ಸೇರಿ ಬಿ-ಖರಾಬು ಪ್ರದೇಶಗಳ ಮಂಜೂರಾತಿಗೆ ಕೋರಿ 40,799 ಅರ್ಜಿಗಳು, ಅರಣ್ಯ ಪ್ರದೇಶಗಳ ಮಂಜೂರಾತಿಗೆ 1,68,119 ಅರ್ಜಿಗಳು, ನಗರ ಪರಿಮಿತಿಯೊಳಗೆ ಮಂಜೂರಾತಿ ಕೋರಿ 68,561 ಅರ್ಜಿಗಳು, ತಾಲೂಕಿನಲ್ಲೇ ವಾಸ ಇಲ್ಲದ 8,665 ಅರ್ಜಿಗಳು ಹಾಗೂ ಕೃಷಿಕರಲ್ಲ 1,00,400 ಜನ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳನ್ನೂ ಅನರ್ಹ ಎಂದು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅನರ್ಹ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲೇ ಪರಿಶೀಲನೆ ವೇಳೆ ವಿಲೇವಾರಿ ಮಾಡಬೇಕು. ಇಂತಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಪರಿಶೀಲನೆಯೇ ಅಂತಿಮವಲ್ಲ. ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರ್ಹ ಅರ್ಜಿಯನ್ನು ವಿಸರ್ಜಿಸಲಾಗಿದ್ದರೆ ಅಂತಹ ಅರ್ಜಿಗಳನ್ನು ಮತ್ತೆ ಮರು ಪರಿಶೀಲನೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಿಂಚಿತ್ತೂ ತಕರಾರು ಬರಬಾರದು, ಕಡತ ಕಳೆದು ಹೋಯ್ತು ಎಂದು ರೈತರು ಮತ್ತೆ ಸರ್ಕಾರಿ ಕಚೇರಿಗೆ ಅಲೆಯಬಾರದು ಎಂಬ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ. ಹೀಗಾಗಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಮಂಜೂರಾದ ಜಮೀನಿಗೆ ಪೋಡಿ ಮಾಡಿಸಿ, ಪಹಣಿಯಲ್ಲಿ ಹೆಸರನ್ನು ನಮೂದಿಸಿ ಸ್ವತಃ ತಹಶೀಲ್ದಾರರು ನೋಂದಣಿ ಕಚೇರಿಯಲ್ಲಿ ಜಮೀನಿನ ನೋಂದಣಿನ್ನು ಮಾಡಿ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now