ನವದೆಹಲಿ: ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷಾಚರಣೆ ನಿಮಿತ್ತ ಐತಿಹಾಸಿಕ ಸೆಂಟ್ರಲ್ ಹಾಲ್ನಲ್ಲಿ (Central Hall) ಸಮಾರಂಭ ನಡೆಯಿತು.
ಇನ್ನು ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ಮಂಗಳವಾರದಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆರಂಭಿಸಿದೆ.
ಸಂಸತ್ತಿನ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು ಅವರು, ಭಾರತದ ಪ್ರಜಾಪ್ರಭುತ್ವ ತತ್ವ ನೀತಿ ರೂಪಿಸುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ. ಸಂವಿಧಾನವು ಜೀವಂತ ಮತ್ತು ಪ್ರಗತಿಪರ ದಾಖಲೆಯಾಗಿದೆ.
75 ವರ್ಷಗಳ ಹಿಂದೆ ಸಂವಿಧಾನದ ಅಂಗೀಕಾರ ಒಂದು ಐತಿಹಾಸಿಕ ಕ್ಷಣ. ಈ ವೇಳೆ ದೇಶದ ಅಡಿಪಾಯದ ಪಠ್ಯವನ್ನು ರೂಪಿಸುವಲ್ಲಿ ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಕೊಡುಗೆಯನ್ನು ಒತ್ತಿ ಹೇಳಿದರು. ನಮ್ಮ ಸಂವಿಧಾನವೂ ಜೀವಂತ ಮತ್ತು ಪ್ರಗತಿ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಗೊಂಡ ಅಭಿವೃದ್ಧಿಯ ಗುರಿ ಸಾಧಿಸಿದ್ದೇವೆ ಎಂದು ಮುರ್ಮು ಹೇಳಿದರು.
ನಮ್ಮ ಸಂವಿಧಾನ, ನಮ್ಮ ಆತ್ಮಗೌರವ ಅಭಿಯಾನದ ಅಡಿಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಈ ವೇಳೆ ರಾಷ್ಟ್ರಪತಿ ದೌಪದಿ ಮುರ್ಮು(President Draupadi Murmu) ಅವರು 75 ರೂಪಾಯಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಸಂವಿಧಾನ ದಿನಾಚರಣೆಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ನಡುವೆ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಸಂವಿಧಾನವು ನಮ್ಮ ದೇಶದ ಅತ್ಯಂತ ಪವಿತ್ರ ಗ್ರಂಥವಾಗಿದೆ. ನಮ್ಮ ಸಂವಿಧಾನವು ನಮ್ಮ ಸಾಮೂಹಿಕ ಮತ್ತು ವೈಯಕ್ತಿಕ ಸ್ವಾಭಿಮಾನವನ್ನು ಖಾತ್ರಿಪಡಿಸುತ್ತದೆ.
ನಮ್ಮ ದೇಶದ ವೈವಿಧ್ಯತೆಯು ನಮ್ಮ ಸಂವಿಧಾನ ಸಭೆಯಲ್ಲಿ ಅಭಿವ್ಯಕ್ತಿ ಪಡೆಯಿತು. ಸಂವಿಧಾನ ಸಭೆಯಲ್ಲಿ ಎಲ್ಲಾ ಪ್ರಾಂತ್ಯಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಅಖಿಲ ಭಾರತ ಪ್ರಜ್ಞೆಗೆ ಧ್ವನಿ ಸಿಕ್ಕಿತು ಎಂದು ಹೇಳಿದರು.
ನಮ್ಮ ಸಂವಿಧಾನವು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯದ ಬಲವಾದ ಅಡಿಪಾಯವಾಗಿದೆ. ಎಲ್ಲಾ ಭಾರತೀಯರು ತಮ್ಮ ನಡವಳಿಕೆಯಲ್ಲಿ ಸಾಂವಿಧಾನಿಕ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಬೇಕು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ರಾಷ್ಟ್ರೀಯ ಗುರಿಯನ್ನು ಸಾಧಿಸಲು ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಮುರ್ಮು ತಿಳಿಸಿದರು.
ಸಂವಿಧಾನ ಅಂಗೀಕರಗೊಂಡ 75ನೇ ವರ್ಷಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದರು. ರಾಜನಾಥ್ ಸಿಂಗ್ ಅವರು ಕೂಡ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರಿಗೆ ಅವರಿಗೆ ಗೌರವ ಸಲ್ಲಿಸಿದ ಸಂವಿಧಾನದ ಶುಭಾಶಯ ತಿಳಿಸಿದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಂವಿಧಾನದ ತತ್ವ ರಕ್ಷಣೆಗೆ ಭಾರತದ ಜನರು ಒಗ್ಗೂಡಬೇಕು ಎಂದು ಕರೆ ನೀಡಿ, ಶುಭಾಶಯ ತಿಳಿಸಿದರು.
ಭಾರತದ ಐತಿಹಾಸಿಕ ಘಟನೆ ಮಹತ್ವ ಗುರುತಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿ ಸರ್ಕಾರ 2015ರ ನವೆಂಬರ್ 26ನ್ನು ಸಂವಿಧಾನ ದಿನವಾಗಿ ಘೋಷಿಸಿದೆ. ಅಂದಿನಿಂದ ಪ್ರತಿ ವರ್ಷ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.