ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ನೀವಿನ್ನು ಮತ ಚಲಾಯಿಸಲು ನೋಂದಾಯಿಸಿಕೊಳ್ಳದಿದ್ದರೆ ಅಥವಾ ಬದಲಾವಣೆಗಳನ್ನು ಮಾಡಲು ಬಯಸಿದರೆ, ಅದನ್ನು ಮಾಡಲು ನಿಮಗಿನ್ನೂ ಸಮಯವಿದೆ.
ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪ್ರಕಾರ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನದ 10 ದಿನಕ್ಕೂ ಮೊದಲು ನಾಗರಿಕರು ತಮ್ಮ ನೋಂದಣಿ ಅಥವಾ ತಿದ್ದುಪಡಿಯನ್ನು ಮಾಡಬಹುದು.
ಏಪ್ರಿಲ್ 26 ರಂದು ಮತದಾನ ನಡೆಯುವ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಮತದಾರರಿಗೆ ಮಾರ್ಚ್ 25 ಕೊನೆಯ ದಿನವಾಗಿದೆ. ಅದೇ ರೀತಿ ಉತ್ತರದ 14 ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 9 (ಮತದಾನ ದಿನ ಮೇ 7) ಆಗಿದೆ.
ವ್ಯಕ್ತಿಯೊಬ್ಬರು ನೋಂದಣಿ ಮಾಡಿಕೊಂಡಿದ್ದರೆ, ಆದರೆ ಅವರ ಬಳಿಯಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಅಂತವರು ಕೂಡ ಮತ ಚಲಾಯಿಸಬಹುದು. ಇದಕ್ಕಾಗಿ ಮತದಾರರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ-ದೃಢೀಕೃತ ಗುರುತಿನ ಪುರಾವೆಗಳಲ್ಲಿ ಯಾವುದನ್ನಾದರೂ ಒಂದನ್ನು ಒಯ್ಯಬೇಕಾಗುತ್ತದೆ.
‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಖಚಿತಪಡಿಸಿಕೊಂಡರೆ ಸಾಕು. ನೀವು ಆ ಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಮತದಾನಕ್ಕೂ ಮೊದಲು ಪರಿಶೀಲನೆ ಕೌಂಟರ್‌ನಲ್ಲಿ ಅದನ್ನು ತೋರಿಸಬಹುದು.
‘ವ್ಯಕ್ತಿಯು ವೋಟರ್ ಐಡಿಯನ್ನು ಹೊಂದಿಲ್ಲದಿದ್ದರೆ, ಮಾನ್ಯವಾದ ಗುರುತಿನ ಚೀಟಿ ಪುರಾವೆಯನ್ನು ತೋರಿಸುವುದು ಅಗತ್ಯವಾಗಿರುತ್ತದೆ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚುವರಿ ಸರ್ಕಾರಿ ಗುರುತಿನ ಪುರಾವೆಯನ್ನು ಒಯ್ಯುವುದು ಸೂಕ್ತವಾಗಿದೆ.
ನಾಗರಿಕರು E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪರಿಶೀಲನೆಗಾಗಿ ಚುನಾವಣಾ ಅಧಿಕಾರಿಗಳಿಗೆ ತೋರಿಸಬಹುದು. ಆದರೆ, ಅದರ ಪ್ರಿಂಟ್ ತೆಗೆದುಕೊಳ್ಳಬಾರದು’ ಎನ್ನುತ್ತಾರೆ ಅಧಿಕಾರಿ.
ಆದರೆ, ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.
ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳನ್ನು ವೇಗವಾಗಿ ಹುಡುಕಲು ಸ್ಕ್ರೀನ್‌ಶಾಟ್ ಚುನಾವಣಾ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಲು ನಾಗರಿಕರು ಫಾರ್ಮ್ 6 ಅನ್ನು ಭರ್ತಿ ಮಾಡಬೇಕು, ತಿದ್ದುಪಡಿಗಳನ್ನು ಮಾಡಲು ಬಯಸುವವರು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು.
ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ (https://voters.eci.gov.in/) ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಬಹುದು ಅಥವಾ ಡೌನ್‌ಲೋಡ್ ಮಾಡಿ ಭೌತಿಕವಾಗಿ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸಬಹುದು. ಅವುಗಳನ್ನು ಅಂಚೆ ಮೂಲಕವೂ ಕಳುಹಿಸಬಹುದು.
ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಅರ್ಜಿದಾರರು ಫಾರ್ಮ್ 8 ಎ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ.