ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಯದುವೀರ್-ತ್ರಿಷಿಕಾ ಒಡೆಯರ್ ದಂಪತಿಯ 2ನೇ ಮಗನ ತೊಟ್ಟಿಲು ಶಾಸ್ತ್ರ ನೆರವೇರಿತು. ರಾಜವಂಶಸ್ಥ, ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಯ 2ನೇ ಗಂಡು ಮಗುವಿನ ತೊಟ್ಟಿಲು ಶಾಸ್ತ್ರ ಕುಲದೇವತೆ ಚಾಮುಂಡಿ ತಾಯಿಯ ದೇವಸ್ಥಾನದ ಆವರಣದಲ್ಲಿ ಸಾಂಪ್ರದಾಯಿಕವಾಗಿ ಬುಧವಾರ ನಡೆಯಿತು.
ತೊಟ್ಟಿಲು ಶಾಸ್ತ್ರಕಾರ್ಯಕ್ರಮ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಸಂಪಿಗೆ ಮರಕ್ಕೆ ಕಟ್ಟಿದ ಬೆಳ್ಳಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಸಾಂಪ್ರದಾಯಿಕವಾಗಿ ತೊಟ್ಟಿಲು ಶಾಸ್ತ್ರ ನೆರವೇರಿತು.
ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಒಡೆಯರ್ ಕುಟುಂಬ, ದೇವಿಯ ಮೂಲ ಮೂರ್ತಿಯ ಗರ್ಭಗುಡಿಯಲ್ಲಿ ರೇಷ್ಮೆ ಸೀರೆ ಮೇಲೆ ಮಗುವನ್ನು ಮಲಗಿಸಿ ಪೂಜೆ ಆರಂಭಿಸಿದರು. ಶರನ್ನವರಾತ್ರಿಯ ವೇಳೆ ದಂಪತಿಗೆ 2ನೇ ಗಂಡು ಮಗು ಜನಿಸಿರುವುದು ರಾಜಮನೆತನಕ್ಕೆ ಸುಭಿಕ್ಷೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ತೊಟ್ಟಿಲು ಶಾಸ್ತ್ರ ಮಾಡಲಾಯಿತು ಎಂದು ಅರಮನೆ ಪುರೋಹಿತರೊಬ್ಬರು ಮಾಹಿತಿ ನೀಡಿದರು.
“ಕುಲದೇವತೆ ಅಮ್ಮನವರ ಸನ್ನಿಧಿಯಲ್ಲಿ ನಮ್ಮ ಎರಡನೇ ಮಗನ ತೊಟ್ಟಿಲು ಶಾಸ್ತ್ರ ಸಾಂಪ್ರದಾಯಿಕವಾಗಿ ನೆರವೇರಿದೆ ಅಷ್ಟೇ. ಇದರಲ್ಲಿ ಅಂಥ ಯಾವುದೇ ವಿಶೇಷತೆ ಇಲ್ಲ. ರಾಜಮನೆತನದ ಸಂಪ್ರದಾಯದಂತೆ ಅಮ್ಮನವರಾದ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು” ಎಂದರು.