ಚಾಮರಾಜನಗರ: ಫೆಂಗಲ್ ಚಂಡಮಾರುತದ ಪರಿಣಾಮ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಬೀರಿದ್ದು, ಹವಾಮಾನ ಇಲಾಖೆ ಇಂದು ಯೆಲ್ಲೋ ಹಾಗೂ ನಾಳೆ ಆರೆಂಜ್ ಅಲರ್ಟ್ ಘೋಷಿಸಿದೆ.
ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ಹವಾಮಾನ ಇಲಾಖೆ ಇಂದು ಯೆಲ್ಲೋ ಅಲರ್ಟ್ ಹಾಗೂ ನಾಳೆ (ಸೋಮವಾರ) ಆರೆಂಜ್ ಅಲರ್ಟ್ ನೀಡಿದೆ.
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇಂದು ಬಹುತೇಕ ಕಡೆಗಳಲ್ಲಿ ತುಂತುರು ಮಳೆಯಿಂದ (Light Rain) ಸಾಧಾರಣ ಮಳೆ (Rather Heavy Rain) ಆಗುವ ಸಾಧ್ಯತೆಯಿದ್ದು, ಅಲ್ಲಲ್ಲಿ ಬಿರುಗಾಳಿಸಹಿತ ಭಾರೀ ಮಳೆಯಾಗುವ (Heavy rain) ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಚಂಡಮಾರುತದ ಸಮಯದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮರಗಳು, ದೂರವಾಣಿ ಅಥವಾ ವಿದ್ಯುತ್ ತಂತಿಗಳ ಕೆಳಗೆ ನಿಲ್ಲುವುದು ಅಪಾಯ. ನಾಡಿನ ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೋರು ಮಳೆಯಾಗಿದೆ. ಅಮವಾಸ್ಯೆ ಮತ್ತು ಭಾನುವಾರದ ಹಿನ್ನೆಲೆಯಲ್ಲಿ ಭಕ್ತಸಾಗರ ದೇವಾಲಯಕ್ಕೆ ಹರಿದು ಬಂದಿದೆ. ಮಳೆಯ ನಡುವೆಯೂ ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಉರುಳುಸೇವೆ ಮಾಡಿ ಹರಕೆ ತೀರಿಸುತ್ತಿರುವುದು ಕಂಡುಬಂತು.
ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ಹೋಗುವುದು ಉತ್ತಮ. ಶಿಥಿಲಗೊಂಡಿರುವ ಕಟ್ಟಡಗಳಲ್ಲಿರುವುದು ಅಪಾಯ. ಜಾನುವಾರುಗಳನ್ನು ಎತ್ತರದ ಮತ್ತು ಸುರಕ್ಷಿತ ಕಟ್ಟಡಗಳಲ್ಲಿ ಇಟ್ಟುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ಯಾತ್ರಾಸ್ಥಳಗಳ ಪೈಕಿಯೂ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮಮಳೆ ಆಗಿದ್ದು, ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಹಿಮಾವೃತ ವಾತಾವರಣವಿದೆ.
ವರ್ಷಪೂರ್ತಿ ಹಿಮಚ್ಛಾದಿತವಾಗಿದ್ದರೂ, ಚಳಿಗಾಲ ಮತ್ತು ಫೆಂಗಲ್ ಚಂಡಮಾರುತದಿಂದಾಗಿ ಹಿಮದ ಮಳೆ ಸುರಿಯುತ್ತಿದೆ. ಪ್ರವಾಸಿಗರು ಕರ್ನಾಟಕದಲ್ಲಿ ಕಾಶ್ಮೀರದ ಅನುಭವ ಪಡೆಯುತ್ತಿದ್ದಾರೆ.
ಮಳೆಯ ನಡುವೆ ಹಿಮವನ್ನು ಆಸ್ವಾದಿಸಲು, ಆಧ್ಯಾತ್ಮಿಕತೆಯಲ್ಲಿ ಮಿಂದೇಳಲು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೂಕ್ತ ಸ್ಥಳ. ಈಗ ಬೆಟ್ಟವೇ ಹಿಮದೊಳಗಿದ್ದಂತೆ ಭಾಸವಾಗುತ್ತಿದೆ. ಬೆಟ್ಟದಲ್ಲಿ ಆಗಾಗ್ಗೆ ತುಂತುರು ಮಳೆಯೂ ಆಗುತ್ತಿದೆ. ಮಧ್ಯಾಹ್ನ 1 ಗಂಟೆಯಾದರೂ ಮುಂಜಾನೆ 6ರಂತೆ ಅನುಭವವಾಗುತ್ತಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 4,800 ಅಡಿ ಎತ್ತರದಲ್ಲಿದೆ. ಹಾಗಾಗಿ, ಸದಾ ತಂಪಾದ ವಾತಾವರಣವಿರುತ್ತದೆ.