ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಫೆಂಗಲ್ ಚಂಡಮಾರುತಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲಿ ಮತ್ತೊಂದು ಭೀಕರ ವಿಡಿಯೋ ವೈರಲ್ ಆಗುತ್ತಿದ್ದು, ಗುಡ್ಡ ಕುಸಿತ ಸಂಭವಿಸಿದ ತಿರುವಣ್ಣಾಮಲೈನಲ್ಲಿ ಜನವಸತಿ ತಗ್ಗು ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗುತ್ತಿದೆ.
ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವೀಡಿಯೋದಲ್ಲಿ ಕೆಸರು, ನೀರು ಮತ್ತು ಅವಶೇಷಗಳ ಮಿಶ್ರಣವು ತಗ್ಗು ಪ್ರದೇಶದ ಜನವಸತಿ ಪ್ರದೇಶದ ಮೆಟ್ಟಿಲುಗಳ ಕೆಳಗೆ ವೇಗವಾಗಿ ಹರಿಯುತ್ತಿದ್ದು, ಜನರ ಮನೆಗಳಿಗೆ ಪ್ರವೇಶಿಸುವುದನ್ನುತೋರಿಸುತ್ತದೆ.
ಮೂಲಗಳ ಪ್ರಕಾರ ಈ ಘಟನೆ ಭಾನುವಾರ ನಡೆದಿದ್ದು, ತಮಿಳುನಾಡಿನ ಪವಿತ್ರಕ್ಷೇತ್ರ ತಿರುವಣ್ಣಾಮಲೈನ ಪಾವಲ ಕುಂಡ್ರು ಪ್ರದೇಶದಲ್ಲಿ ನಡೆದಿದೆ. ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ನೀರು ಸಾಗಿದ್ದು, ಗುಡ್ಡದ ತುದಿಯಿಂದ ಬಂಡೆಯೊಂದು ಉರುಳಿಬಿದ್ದು 1 ಕಿಲೋ ಮೀಟರ್ ದೂರದಲ್ಲಿದ್ದ ಮನೆಯ ಮೇಲೆ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸುಮಾರು ಒಂದು ನಿಮಿಷದ ನಂತರ ಅಂತಿಮವಾಗಿ ಪ್ರವಾಹದ ನೀರಿನ ವೇಗ ದುರ್ಬಲಗೊಳ್ಳುವವರೆಗೂ ನೀರು ತನ್ನ ದಾರಿಯಲ್ಲಿ ಸಿಕ್ಕ ವಸ್ತುಗಳನ್ನು ಹೊತ್ತು ಸಾಗುತ್ತದೆ. ಮಾರ್ಗಮಧ್ಯೆ ಇದ್ದ ದ್ವಿಚಕ್ರವಾಹನಗಳು ಮತ್ತು ಆಟೋವನ್ನೂ ನೀರು ಎಳೆದೊಯ್ದಿದೆ.
ಇನ್ನು ಕಳೆದ ಮೂರು ದಿನಗಳಿಂದ ತಮಿಳುನಾಡನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಫೆಂಗಲ್ ಚಂಡಮಾರುತ ನಿನ್ನೆ ದುರ್ಬಲಗೊಂಡಿದ್ದು, ತನ್ನ ವೇಗವನ್ನು ಕಳೆದುಕೊಂಡಿದೆ. ಅದಾಗ್ಯೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ಇನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ತುರ್ತು ಸಂಪುಟ ಸಭೆ ನಡೆಸಿ ಚಂಡಮಾರುತದಿಂದ ಉಂಟಾದ ಹಾನಿಯನ್ನು ಮೌಲ್ಯಮಾಪನ ಮಾಡಿದರು. ಅಲ್ಲದೆ ಭೂಕುಸಿತದಿಂದ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ ಪರಿಹಾರ ಮತ್ತು ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಿದರು.
ಧಾರಾಕಾರ ಮಳೆಗೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿವೆ. ತಮಿಳುನಾಡು ಸರ್ಕಾರದ ಅಂದಾಜಿನ ಪ್ರಕಾರ, ಚಂಡಮಾರುತವು 14 ಜಿಲ್ಲೆಗಳಲ್ಲಿ ಅಭೂತಪೂರ್ವ ವಿನಾಶವನ್ನು ಉಂಟುಮಾಡಿದೆ, ವ್ಯಾಪಕವಾಗಿ ರಸ್ತೆಗಳು, ವಿದ್ಯುತ್ ಮಾರ್ಗಗಳನ್ನು ಹಾನಿಗೊಳಿಸಿದೆ ಮತ್ತು ಭಾರೀ ಪ್ರವಾಹವನ್ನು ಉಂಟುಮಾಡಿದೆ ಎಂದು ಹೇಳಿದೆ.