ಮೈಸೂರು : ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕ ಜಾತ್ರಾ ಮಹೋತ್ಸವವು ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿದೆ.
ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬೆಳಗ್ಗೆ 10.45 ರಿಂದ 11.30 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದ ಶ್ರೀ ನಂಜುಂಡೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವದಲ್ಲಿ, ದೇವಾಲಯದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.
ಬಣ್ಣ ಬಣ್ಣದ ಹೂ ಮತ್ತು ವಜ್ರಾಭರಣಗಳಿಂದ ಅಲಂಕೃತಗೊಂಡ ಶ್ರೀ ನಂಜುಂಡೇಶ್ವರಸ್ವಾಮಿ ಹಾಗೂ ಶ್ರೀ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿ ಸೇರಿದಂತೆ ಶ್ರೀ ಗಣಪತಿ, ಚಂಡಿಕೇಶ್ವರ ಹಾಗೂ ಶ್ರೀ ಮನೋನ್ಮಣಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ಹಲವು ಧಾರ್ಮಿಕ ವಿಧಿ -ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಸುತ್ತ ಮೆರವಣಿಗೆ ತಂದ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂ ಹಾಗೂ ಬಂಟಿಂಗ್ಸ್ ಮತ್ತು ಬಾವುಟಗಳಿಂದ ಅಲಂಕರಿಸಲಾಗಿದ್ದ ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ರಥಕ್ಕೆ ಪೂಜೆ ಸಲ್ಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಮತ್ತಿತರ ಗಣ್ಯರು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಭಕ್ತಿ ಭಾವ ಮೆರೆದರು.
ಮೊದಲಿಗೆ ಶ್ರೀ ಗಣಪತಿ ಹಾಗೂ ಚಂಡಿಕೇಶ್ವರ, ನಂತರ ಪಾರ್ವತಿ ಸಮೇತ ಶ್ರೀ ನಂಜುಂಡೇಶ್ವರ ಸ್ವಾಮಿ ಅದರ ಹಿಂದೆ ಶ್ರೀ ಮನೋನ್ಮಣಿ ಅಮ್ಮನವರ ರಥಗಳು ಒಂದರ ಹಿಂದೆ ಒಂದರಂತೆ ಪಟ್ಟಣದ ರಥ ಬೀದಿಯಲ್ಲಿ ಸಾಗಿ ಯಾವುದೇ ಅಡೆತಡೆ ಇಲ್ಲದೆ ಸ್ವಸ್ಥಾನ ತಲುಪಿದವು.
ದೊಡ್ಡ ಜಾತ್ರೆಯಲ್ಲಿ 5 ಪಂಚಮಹಾರಥಗಳು ರಥೋತ್ಸವದಲ್ಲಿ ಭಾಗಿಯಾದರೆ, ಚಿಕ್ಕ ಜಾತ್ರೆಯಲ್ಲಿ ದೊಡ್ಡ ರಥಗಳನ್ನು ಬಿಟ್ಟು ಚಿಕ್ಕ ಚಿಕ್ಕ ಮೂರು ರಥಗಳು ಮಾತ್ರ ಪಾಲ್ಗೊಳ್ಳುವುದು ವಿಶೇಷವಾಗಿದೆ.
ದೇವಾಲಯದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಅವರು ಮಾತನಾಡಿ, ”ಈ ದಿವಸ ಎಂದಿನಂತೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆದಿದ್ದೇವೆ. ದೇವರಿಗೆ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ ಹಾಗೂ ರುದ್ರಾಭಿಷೇಕವನ್ನ ನೆರವೇರಿಸಲಾಗಿದೆ. ನಂತರ ಪ್ರಾತಃಕಾಲ ಪೂಜೆ, ನಿತ್ಯೋತ್ಸವ, ಬಲಿಪ್ರಧಾನವಾದ ನಂತರ ಜಂಗಮಕಾಲ ಪೂಜೆಯೊಂದಿಗೆ ಬೆಳಗಿನ ಪೂಜೆ ಸಮಾಪ್ತಿಯಾಗಿದೆ.
ನವಗ್ರಹ ಪೂಜೆ, ಗಣಪತಿ ಪ್ರಾರ್ಥನೆಯನ್ನ ನೆರವೇರಿಸಿ, ದೇವಾಲಯದ ಸುತ್ತ ಪ್ರದಕ್ಷಿಣಾಕಾರವಾಗಿ ಬಂದು ಉತ್ಸವವು ಮಂಟಪ ಪ್ರದರ್ಶನವಾದ ನಂತರ ಮಂಗಲಾಷ್ಠ ಪಠಣ ಪೂರ್ವಕವಾಗಿ 10:30 ರಿಂದ 11:15ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀಯವರ ರಥಾರೋಹಣ ನೇರವೇರಿಸಲಾಗಿದೆ” ಎಂದರು.
ದೇಶ-ವಿದೇಶಗಳಿಂದ ಆಗಮಿಸಿದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಭಕ್ತಿ ಭಾವ ಮೆರೆದರಲ್ಲದೆ, ಚಿಕ್ಕ ಜಾತ್ರಾ ರಥೋತ್ಸವದಲ್ಲೂ ಪಾಲ್ಗೊಂಡು ತೇರುಗಳಿಗೆ ಹಣ್ಣು- ಜವನ ಎಸೆಯುವ ಮೂಲಕ ಭಕ್ತಿ ನಮನ ಸಲ್ಲಿಸಿದರು.
ರಥೋತ್ಸವ ಸಾಗುವ ರಥದ ಬೀದಿಯಲ್ಲಿ ಹರಕೆ ಹೊತ್ತ ಭಕ್ತರು ಪ್ರಸಾದ ವಿನಿಯೋಗ ಮಾಡಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಅಧಿಕಾರಿ ಮಹೇಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಸಾಕ್ಷಿಯಾದರು.