ಮುರುಡೇಶ್ವರ ಕಡಲ ತೀರದಲ್ಲಿ ಮತ್ತೊಂದು ಘೋರ ಅನಾಹುತ ಸಂಭವಿಸಿದೆ. ಪ್ರವಾಸಕ್ಕೆ ಹೋಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ದುರಂತಕ್ಕೆ ತುತ್ತಾಗಿದ್ದಾರೆ. ಶಿಕ್ಷಕರು, ಸಹಪಾಠಿಗಳ ಜೊತೆ ಪ್ರವಾಸಕ್ಕೆ ಹೋದವರು ಸಮುದ್ರದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ನಿನ್ನೆ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರ ಶವ ಇಂದು ತೇಲಿ ಬಂದಿದೆ.
ಕೋಲಾರದ ಮುಳುಬಾಗಿಲಿನ ಕೊತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವತಿಯಿಂದ ಶಾಲಾ ಪ್ರವಾಸ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು & ಶಿಕ್ಷಕರು ಸೇರಿ 57 ಮಂದಿ ಪ್ರವಾಸಕ್ಕೆ ಮುರುಡೇಶ್ವರಕ್ಕೆ ಬಂದಿದ್ದರು.
ನಿನ್ನೆ ಮುರುಡೇಶ್ವರ ಬೀಚ್ನಲ್ಲಿ ಆಟವಾಡುವಾಗ 7 ಮಂದಿ ನಾಪತ್ತೆಯಾಗಿದ್ದರು. ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿದ್ದ 7 ವಿದ್ಯಾರ್ಥಿನಿಯರ ಪೈಕಿ ನಿನ್ನೆಯೇ ಮೂವರನ್ನ ರಕ್ಷಣೆ ಮಾಡಲಾಗಿತ್ತು. ನಿನ್ನೆ ಸಂಜೆ ಓರ್ವ ವಿದ್ಯಾರ್ಥಿನಿ ಮೃತದೇಹವನ್ನು ಲೈಫ್ ಗಾರ್ಡ್ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಇಂದು ಉಳಿದ ಮೂವರ ಮೃತದೇಹ ಬೇರೆ, ಬೇರೆ ಭಾಗದಲ್ಲಿ ಪತ್ತೆಯಾಗಿದೆ.
ದೀಕ್ಷಾ (15), ಲಾವಣ್ಯ (15), ವಂದನಾ (15), ಶ್ರಾವಂತಿ (15) ಮೃತ ಶಾಲಾ ವಿದ್ಯಾರ್ಥಿನಿಯರು. ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಭಟ್ಕಳ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೋಸ್ಟ್ ಮಾರ್ಟಮ್ ಮಾಡಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.
ಬೀಚ್ನಲ್ಲಿ ಆಟವಾಡುವಾಗ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಪಾಲಾಗಿದ್ದರು. ಕರಾವಳಿ ಕಾವಲು ಪಡೆ ತಂಡದಿಂದ ಶವಗಳ ಪತ್ತೆ ಕಾರ್ಯ ನಡೆಸಲಾಗಿತ್ತು. ಇಂದು ನವೀನ ಬೀಚ್ ರೆಸಾರ್ಟ್ ಬಳಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 260 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 45 ವಿದ್ಯಾರ್ಥಿನಿಯರು ಮುರುಡೇಶ್ವರಕ್ಕೆ ಶಾಲಾ ಪ್ರವಾಸ ಕೈಗೊಂಡಿದ್ದರು. ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತನದ ಆರೋಪದ ಹಿನ್ನೆಲೆಯಲ್ಲಿ ಶಾಲಾ ಪ್ರಾಂಶುಪಾಲೆ ಶಶಿಕಲಾ ಅವರನ್ನ ಅಮಾನತು ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತ ದೇಹಗಳನ್ನ ಹುಟ್ಟೂರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.