ಹೊಸದಿಲ್ಲಿ: ಜಾಮೀನು ಅರ್ಜಿಗಳನ್ನು ವರ್ಷಗಟ್ಟಲೆ ಬಾಕಿಯಿರಿಸುವ ನ್ಯಾಯಾಲಯಗಳ ಅಭ್ಯಾಸವನ್ನು ಆಕ್ಷೇಪಿಸಿರುವ ಸರ್ವೋಚ್ಚ ನ್ಯಾಯಾಲಯವು,ಇಂತಹ ವಿಷಯಗಳನ್ನು ನಿರ್ಧರಿಸುವಲ್ಲಿ ಒಂದು ದಿನ ವಿಳಂಬವಾದರೂ ಅದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ವೈಯಕ್ತಿಕ ಸ್ವಾತಂತ್ರ್ಯದ ಮಹತ್ವಕ್ಕೆ ಪದೇ ಪದೇ ಒತ್ತು ನೀಡಿದೆ ಎಂದು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಹೇಳಿರುವ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ಕೆ.ವಿಶ್ವನಾಥನ್ ಅವರ ಪೀಠವು,’ಜಾಮೀನು ಅರ್ಜಿಯನ್ನು ನಿರ್ಧರಿಸುವಲ್ಲಿ ಒಂದು ದಿನ ವಿಳಂಬವಾದರೂ ಅದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಈ ನ್ಯಾಯಾಲಯವು ಗಮನಿಸಿದೆ
. ಜಾಮೀನು ಅರ್ಜಿಯನ್ನು ವರ್ಷಗಟ್ಟಲೆ ಬಾಕಿಯಿರಿಸುವ ಅಭ್ಯಾಸವನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ತಿಳಿಸಿದೆ.
ತನ್ನ ಜಾಮೀನು ಅರ್ಜಿಯು ಕಳೆದ ವರ್ಷದ ಆಗಸ್ಟ್‌ನಿಂದಲೂ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿ ವ್ಯಕ್ತಿಯೋರ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಪರಿಣಾಮಕಾರಿ ವಿಚಾರಣೆಯಿಲ್ಲದೆ ವಿಷಯವನ್ನು ಪದೇ ಪದೇ ಮುಂದೂಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದರು.
ಉಚ್ಚ ನ್ಯಾಯಾಲಯದಲ್ಲಿ ನ.11ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತನಗೆ ಮಾಹಿತಿ ಲಭಿಸಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,’ಅಂದೇ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಮತ್ತು ಎರಡು ವಾರಗಳಲ್ಲಿ ನಿರ್ಧರಿಸುವಂತೆ ನಾವು ಸಂಬಂಧಿತ ನ್ಯಾಯಾಧೀಶರನ್ನು ವಿನಂತಿಸಿಕೊಳ್ಳುತ್ತಿದ್ದೇವೆ ‘ ಎಂದು ಹೇಳಿತು ಮತ್ತು ಅರ್ಜಿಯನ್ನು ವಿಲೇವಾರಿಗೊಳಿಸಿತು.