ಮೈಸೂರು: ಕನಿಷ್ಠ 7500 ರೂ. ಪಿಂಚಣಿ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ಮೈಸೂರಿನ ಗಾಯತ್ರಿಪುರಂನಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಪಿ.ನಿಂಗೇಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಇಪಿಎಪ್ ನಿವೃತ್ತ ನೌಕರರ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕಾರ್ಖಾನೆಗಳ ನಿವೃತ್ತ ನೌಕರರು, ಕೆಎಸ್‌ಆರ್‌ಟಿಸಿ, ಬಿಇಎಂಎಲ್ ಪಾಲ್ಕನ್, ಸಿಐಟಿಯುಸಿ, ಎಐಟಿಯುಸಿ ಮುಖಂಡರ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಹೋರಾಟವನ್ನು ಬೆಂಬಲಿಸಿ ಮೈಸೂರಿನಲ್ಲೂ ಪ್ರತಿಭಟನೆ ನಡೆಸುತ್ತಿದ್ದು, ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿಭಟನೆಯಲ್ಲಿ ಕನಿಷ್ಠ ಪಿಂಚಣಿ 7500 ರೂ.ಗೆ ಹೆಚ್ಚಿಸಬೇಕು, ಕನಿಷ್ಠ ಪಿಂಚಣಿ ಜತೆಗೆ ಡಿಎ ಸೇರಿಸಿ ಜಾರಿಗೊಳಿಸಬೇಕು, ಕಾರ್ಮಿಕರ ವಿಮಾ ಯೋಜನೆಯ ಪರಿಮಿತಿಯಲ್ಲಿ ಆರೋಗ್ಯ ಸೇವೆ ಅಳವಡಿಸಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ 7500 ರೂ. ಪಿಂಚಣಿ ನೀಡುವಂತೆ ಒತ್ತಾಯಿಸಿ ರಾಷ್ಟ್ರೀಯ ಎಪಿಎಫ್ಎಸ್ 1995 ಸಂಘಟನೆ ದೆಹಲಿಯ ರಾಮಲೀಲ ಮೈದಾನದಲ್ಲಿ ಫೆ.21ರಿಂದ 26ರವರೆಗೆ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದೊಂದಿಗೆ ಪಾರ್ಲಿಮೆಂಟ್ ಚಲೋ ಹಮ್ಮಿಕೊಂಡಿದೆ.
ಮಾರ್ಚ್ 2017ರಲ್ಲಿ ಸರ್ವೋತ್ಛ ನ್ಯಾಯಾಲಯ ಹೊರಡಿಸಿರುವ ಸಂಪೂರ್ಣ ಪಿಂಚಣಿ ನೀಡಿಕೆ ಆದೇಶವನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್.ಜಿ. ಮೋಹನ ಕೃಷ್ಣ, ಉಪಾಧ್ಯಕ್ಷ ವಿ.ಬಸವರಾಜು, ಸಹ ಕಾರ್ಯದರ್ಶಿ ಬಸವರಾಜು ಹಾಜರಿದ್ದರು.