ಮುಂಬೈ: ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಹೇಳಿದ್ದಾರೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಭಾನುವಾರ ರಾತ್ರಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಡಿಸೆಂಬರ್ 2 ಅಥವಾ 3 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಹೊಸ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಡಿಸೆಂಬರ್ 5 ರಂದು ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫಡ್ನವೀಸ್ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡನೇ ಅವಧಿ ಕೆಲವೇ ದಿನಗಳ ಕಾಲ ಇತ್ತು. ಇನ್ನು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಅವರು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಸತಾರಾ ಜಿಲ್ಲೆಯ ತಮ್ಮ ಸ್ಥಳೀಯ ಡೇರ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ರಚನೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಮತ್ತು ಮಹಾಯುತಿಯ ಮೂರು ಮಿತ್ರಪಕ್ಷಗಳಾದ ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಮ್ಮತದ ಮೂಲಕ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ರಾಜ್ಯದ ನೂತನ ಸಿಎಂ ಯಾರು ಎಂಬುದನ್ನು ಬಿಜೆಪಿ ನಿರ್ಧರಿಸಲಿದೆ ಎಂದಿದ್ದು, ಸರ್ಕಾರ ರಚನೆ ವಿಚಾರವಾಗಿ ಮಹಾಯುತಿ ಪಾಲುದಾರರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲಾ ಚರ್ಚೆಗಳು ನಡೆಯುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ಕೂಡ ನಡೆಸಲಾಗಿದೆ ಎಂದು ಹೇಳಿದರು. ರಾಜ್ಯದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು, ಜನರ ನಿರೀಕ್ಷೆಗಳನ್ನು ಈಡೇರಿಸುತ್ತೇವೆ ಎಂದರು.
ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಒಳಗೊಂಡಿರುವ ಮಹಾಯುತಿಯು ರಾಜ್ಯದ 288 ವಿಧಾನಸಭಾ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ.
ಡಿಸೆಂಬರ್ 5 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ಮಹಾಯುತಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಶನಿವಾರದಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮಹಾರಾಷ್ಟ್ರ ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.