ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವ ಮುಗಿದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ವಿಜಯದಶಮಿಯಂದು ಜಂಬುಸವಾರಿ ಮೆರವಣಿಗೆ ಯಶಸ್ವಿಯಾಗಿದ್ದು, ಗಜಪಡೆ ಮಾವುತರು ವಿಶ್ರಾಂತಿಗೆ ಮೊರೆ ಹೋಗಿದ್ದರು, ಪ್ರವಾಸಿಗರು ಮಾತ್ರ ಮಳೆಯಲ್ಲೂ ಅರಮನೆ ಸುತ್ತಾಡಿ ಸಂಭ್ರಮಿಸಿದರು. ಆದ್ದರಿಂದ ಚಾಮುಂಡಿ ಬೆಟ್ಟ, ಮೃಗಾಲಯ ಅರಮನೆ ಸೇರಿದಂತೆ ದಸರಾ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ವೀಕ್ಷಣೆಗೆ ಜನರು ಬರುತ್ತಿದ್ದು, ನಗರದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ನಗರದ ಹೃದಯ ಭಾಗದಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದ ಮಟ್ಟಿಗೆ ಮುಂಜಾನೆಯಿಂದಲೇ ಟ್ರಾಫಿಕ್ ನಿರ್ಮಾಣವಾಗಿದೆ.
ಆಯುಧ ಪೂಜೆ, ವಿಜಯದಶಮಿ ಜತೆಗೆ ವಾರಾಂತ್ಯ ಇದ್ದುದ್ದರಿಂದ ಸತತವಾಗಿ ನಾಲ್ಕು ದಿನ ರಜೆ ಸಿಕ್ಕಿದ್ದರಿಂದ ನೆರೆ ಜಿಲ್ಲೆ, ಇತರೆ ರಾಜ್ಯಗಳ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಕಿಕ್ಕಿರಿದು ತುಂಬಿದ್ದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಕೂಡ ಜನಸಾಗರ ಹರಿದು ಬಂತು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಮೈಸೂರು ನಗರದಲ್ಲಿ ದಸರಾ ದೀಪಾಲಂಕಾರವಾಗಿ ಬರೋಬ್ಬರಿ 10 ದಿನ ಕಳೆದರೂ ದೀಪಾಲಂಕಾರ ನೋಡಲು ಸ್ಥಳೀಯ ನಿವಾಸಿಗಳೊಂದಿಗೆ ನೆರೆ ಜಿಲ್ಲೆಗಳ ಪ್ರವಾಸಿಗರು ಆಗಮಿಸುವುದು ಕಡಿಮೆಯಾಗಿಲ್ಲ. ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಬೈಕ್, ಕಾರುಗಳಲ್ಲಿ ಸಂಚರಿಸುವ ಮೂಲಕ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅ. 12ರಂದು 36,467 ಮಂದಿ ಆಗಮಿಸಿದ್ದಾರೆ. ಕಳೆದ ವರ್ಷ ಇದೇ ದಿನ 26,370 ಮಂದಿ ಭೇಟಿ ನೀಡಿದ್ದು, ಕಳೆದ ಬಾರಿಗಿಂತ ಈ ಬಾರಿ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿರುವುದು ದಾಖಲೆಯಾಗಿದೆ.
ದಸರಾ ದೀಪಾಲಂಕಾರ ಕಣ್ತುಂಬಿಕೊಳ್ಳಲು ನೆರೆ ಜಿಲ್ಲೆಯ ಪ್ರವಾಸಿಗರು ರಾತ್ರಿ ಹೊತ್ತು ಮೈಸೂರಿಗೆ ಬರುತ್ತಿರುವುದು ವಿಶೇಷವಾಗಿದೆ. ವಾರಾಂತ್ಯದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ನಡೆದಿರುವುದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಭಾನುವಾರ ಸಹ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಅಂಗಡಿ ಮಾಲೀಕರು ತಿಳಿಸಿದ್ದಾರೆ.