ಬೆಂಗಳೂರು: ಶುಕ್ರವಾರದಿಂದ ಮೂರು ದಿನಗಳ ಕಾಲ ಸಾಲು ಸಾಲು ರಜೆ ಇರುವುದರಿಂದ ಕೆಂಪೇಗೌಡ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಿತ್ತು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು ಭಾರಿ ಸಂಚಾರ ದಟ್ಟಣೆಯಿಂದ ಕೂಡಿದ್ದವು.ವಿಜಯ ದಶಮಿ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದ ಜನರು ಗುರುವಾರವೇ ಕುಟುಂಬ ಸಮೇತರಾಗಿ ತಮ್ಮೂರಿನತ್ತ ಮುಖ ಮಾಡಿದ್ದರಿಂದ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಅ. 11 ಶುಕ್ರವಾರ ಆಯುಧ ಪೂಜೆ, 12 ಶನಿವಾರ ವಿಜಯ ದಶಮಿ ಹಾಗೂ 13ರಂದು ಭಾನುವಾರ ವಾರಾಂತ್ಯದ ರಜೆ ಇದೆ. ಈ ಹಿನ್ನೆಲೆಯಲ್ಲಿ ಅ. 10ರ ಗುರುವಾರವೇ ಜನ ತಮ್ಮೂರಿನತ್ತ ತೆರಳತೊಡಗಿದರು.
ಹಾಗಾಗಿ, ಮಧ್ಯಾಹ್ನದ ನಂತರ ಒಂದೇ ಬಾರಿ ಸಾವಿರಾರು ವಾಹನಗಳು ರಸ್ತೆಗಿಳಿದಿದ್ದರಿಂದ ಕೆ.ಜಿ. ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಲಾಲ್‌ಬಾಗ್ ರಸ್ತೆ, ಎಂ.ಜಿ. ರಸ್ತೆ, ಸ್ಯಾಂಕಿ ರಸ್ತೆ, ಕೆ.ಆರ್. ಪುರ ರಸ್ತೆ, ಏರ್‌ಪೋರ್ಟ್ ರಸ್ತೆ, ಮೆಜೆಸ್ಟಿಕ್ ಹಾಗೂ ರಾಜಧಾನಿಯ ಮುಖ್ಯ ರಸ್ತೆಗಳಲ್ಲಿಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.
ಸಂಚಾರ ದಟ್ಟಣೆ ಬೇಗ ಬಸ್, ರೈಲು ನಿಲ್ದಾಣ ತಲುಪಬೇಕು ಎಂದುಕೊಂಡಿದ್ದ ಹಲವು ಪ್ರಯಾಣಿಕರು ಸಂಜೆ ಟ್ರಾಫಿಕ್‌ನಲ್ಲಿಸಿಲುಕಿ ಒಂದು ಗಂಟೆ, ಒಂದೂವರೆ ಗಂಟೆ ತಡವಾಗಿ ತಲುಪಿದರು. ಇನ್ನೂ ಅನೇಕರು ಮಧ್ಯಾಹ್ನವೇ ತಮ್ಮ ಸ್ವಂತ ವಾಹನಗಳ ಮೂಲಕ ಊರಿನತ್ತ ಸಾಗಿದರು. ಬಸ್‌ಗಳು ಹಾಗೂ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲುಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿತ್ತು. ಏಕಕಾಲದಲ್ಲಿವಾಹನಗಳು ರಸ್ತೆಗಿಳಿದಿದ್ದರಿಂದ ಬೆಂಗಳೂರು -ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಮಂಗಲ ಬಳಿ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ, ನೆಲಮಂಗಲ ಕುಣಿಗಲ್ ಬೈಪಾಸ್‌ನಿಂದ ಅರಿಶಿನಕುಂಟೆವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
2000 ಬಸ್‌ಗಳ ಸೇವೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ 2000ಕ್ಕೂ ಹೆಚ್ಚು ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಅ.9 ರಿಂದ 12ರವರಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತಾಧಿರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಿಸಲಿದ್ದು, ಅ.13, 14ರಂದು ಆಯಾ ಸ್ಥಳಗಳಿಂದ ಬೆಂಗಳೂರಿಗೆ ವಾಪಸ್ ಆಗಲಿವೆ. ಮೈಸೂರು ದಸರಾ ಜಂಬೂಸವಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರತ್ಯೇಕವಾಗಿ 660 ದಸರಾ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.